ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ನ.28ರಂದು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ ಪಿಜಿ ಮತ್ತು ಆ್ಯಂಟಿ ಸಬೋಟೇಜ್ ಚೆಕ್ (Anti sabotage check) ತಂಡವು ಕಾರ್ಯಕ್ರಮದ ಸಿದ್ಧತೆ ಮತ್ತು ವೇದಿಕೆ ನಿರ್ಮಾಣ ಕಾರ್ಯದ ಪರಿಶೀಲನೆಯನ್ನು ನಡೆಸುತ್ತಿವೆ.
ಎಸ್ ಪಿಜಿ ಮತ್ತು ಎಎಸ್ ಟಿ ತಂಡವು ಆದಿಉಡುಪಿಯ ಹೆಲಿಪ್ಯಾಡ್,ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಜೊತೆಗೆ ಕೃಷ್ಣಮಠ ಮತ್ತು ಪೆಂಡಾಲ್ ಜಾಗದಲ್ಲೂ ತೀವ್ರ ತಪಾಸಣೆ ನಡೆಸುತ್ತಿದೆ.ಈ ಸಂದರ್ಭದಲ್ಲಿ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಭದ್ರತೆಗೆ ಅನುಕೂಲವಾಗುವಂತೆ ಕಾರ್ಯಕ್ರಮ ನಡೆಯುವ ಸ್ಥಳ, ರಸ್ತೆ ಹಾಗೂ ಮತ್ತಿತರ ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಅನಧಿಕೃತ ಬ್ಯಾನರ್, ಬಂಟಿಂಗ್ಸ್‌ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಕ್ರಮ ನಡೆಯುವ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿನ ಅಪಾಯಕಾರಿ ಮರ, ರೆಂಬೆ- ಕೊಂಬೆಗಳನ್ನು ತೆರವುಗೊಳಿಸಬೇಕು. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಬ್ಯಾಗ್, ನೀರಿನ ಬಾಟಲಿ, ಧ್ವಜ ಸೇರಿದಂತೆ ಯಾವುದೇ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಜನರಿಗೆ ಮೊದಲೇ ಮಾಹಿತಿ ನೀಡಬೇಕು ಎಂದರು.


















