ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕ: ರೈಲ್ವೆ ಪೊಲೀಸರಿಂದ ರಕ್ಷಣೆ.

ಉಡುಪಿ: ಚಲಿಸುತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕರೊಬ್ಬರನ್ನು ಚುರುಕಾಗಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಮಡಗಾಂವ್‌ ರೈಲ್ವೆ ನಿಲ್ದಾಣದಲ್ಲಿ ರವಿವಾರ ನಡೆದಿದೆ.

ಸಂಜೆ 7:00 ಸುಮಾರಿಗೆ ಪ್ಲಾಟ್‌ಪಾರಂ ನಂ.1ರಿಂದ ಹೊರಟ ಕೊಂಕಣ ಕನ್ಯಾ ಎಕ್ಸ್‌ಪ್ರೆಸ್ ರೈಲು ಚಲಿಸುತಿದ್ದಂತೆ ಪ್ರಯಾಣಿಕರೊಬ್ಬರು ಇಳಿಯಲು ಪ್ರಯತ್ನಿಸಿದ್ದರು. ಕಾಲು ಜಾರಿ ಅವರು ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಬಿದ್ದರು.

ಆಗ ಅಲ್ಲೇ ಫ್ಲಾಟ್‌ಫಾರಂ ನಂ1ರ ಬಳಿ ನಿಂತಿದ್ದ ರೈಲ್ವೆ ಪೊಲೀಸ್‌ ಕಾನ್‌ಸ್ಟೇಬರ್ ಕಪಿಲ್ ಸಯಾನಿ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಆ‌ರ್.ಎಸ್. ಬಾಯ್ ತಕ್ಷಣವೇ ಆತನನ್ನು ಮೇಲಕ್ಕೆತ್ತಿ ರಕ್ಷಿಸಿದರು. ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರೂ ತನ್ನ ಜೀವರಕ್ಷಿಸಿದ ಪೊಲೀಸ್‌ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕೊಂಕಣ ರೈಲ್ವೆಯ ಪೊಲೀಸ್ ಸಿಬ್ಬಂದಿಗಳಿಬ್ಬರ ಕಾರ್ಯವನ್ನು ಶ್ಲಾಘಿಸಿದ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್‌ಕುಮಾರ್ ಝಾ ಅವರು ಇಬ್ಬರು ಸಿಬ್ಬಂದಿಗಳಿಗೆ ತಲಾ 10,000ರೂ.ಗಳ ನಗದು ಬಹುಮಾನವನ್ನು ಘೋಷಿಸಿದರು.