ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಕಾಳಿಂಗ ಸರ್ಪಗಳ ಸಂಚಾರದ ಹಿನ್ನೆಲೆಯಲ್ಲಿ, ಅರಣ್ಯ ಸಚಿವ ಈಶ್ವರ ಖಂಡ್ರೆ ತುರ್ತು ಕ್ರಮ ಕೈಗೊಂಡಿದ್ದಾರೆ. ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತಿರುವ ಕಾಳಿಂಗ ಸರ್ಪಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲು, ಅರಣ್ಯ ಇಲಾಖೆಯಲ್ಲೇ ವಿಶೇಷ ತಂಡವನ್ನು ರಚಿಸುವಂತೆ ಸೂಚನೆ ನೀಡಿದ್ದಾರೆ.
ಕಾಳಿಂಗ ಸರ್ಪಗಳು ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಉಡುಪಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ಪರಿಹಾರವಾಗಿ, ಖಾಸಗಿ ಸರ್ಪ ಹಿಡಿಯುವ ತಂಡಗಳ ಅವಶ್ಯಕತೆಯನ್ನು ತಪ್ಪಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದು, ಇಲಾಖೆಯ ಐವರು ಸಿಬ್ಬಂದಿಗೆ ನೇರ ತರಬೇತಿ ನೀಡುವಂತೆ ಆದೇಶಿಸಿದ್ದಾರೆ.
ಪ್ರಾದೇಶಿಕ ಅರಣ್ಯಾಧಿಕಾರಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಈ ತಂಡ ETF ಮತ್ತು LTF ಮಾದರಿಯಲ್ಲಿ ಕಾರ್ಯಾಚರಿಸಲಿದೆ. ಇತ್ತೀಚೆಗೆ ಆಗುಂಬೆ ಪ್ರದೇಶದಲ್ಲಿ ಕಾಳಿಂಗ ಸರ್ಪ ಸಂಶೋಧನೆ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ, ಕಾಳಿಂಗನ ಸೆರೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಕ್ಕೆ ಕೊನೆ ಹಾಡುವ ಉದ್ದೇಶವನ್ನೂ ಸಚಿವರು ವ್ಯಕ್ತಪಡಿಸಿದ್ದಾರೆ.


















