ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ.

ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.

ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಇಂದು ಮುಂಬೈನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅನೇಕ ಬಾಲಿವುಡ್‌ ತಾರೆಯರು ಅವರನ್ನ ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದ್ದರು.

ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಗೋವಿಂದ, ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ ದೇಶ್‌ಮುಖ್‌, ಅಮೀಷಾ ಪಟೇಲ್‌ ಸೇರಿದಂತೆ ಮುಂತಾದ ಸ್ಟಾರ್‌ ನಟ-ನಟಿಯರು ಮುಂಬೈನ್‌ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿ ಧರ್ಮೇಂದ್ರ ಅವರ ಆರೋಗ್ಯವನ್ನ ವಿಚಾರಿಸಿದ್ದರು. ಇದಾದ ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಮಾಡಿಸಿ, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲು ಕುಟುಂಬ ನಿರ್ಧರಿಸಿತ್ತು.

ಧರ್ಮೇಂದ್ರ ಅವರ ಕಿರಿಯ ಮಗ, ನಟ ಬಾಬಿ ಡಿಯೋಲ್, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ʻಮುಂಬೈ ಸಮೀಪದ ಖಂಡಾಲಾದಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೊಂದಿಗೆ ತಂದೆ ಧರ್ಮೇಂದ್ರ ಅವರು ವಾಸಿಸುತ್ತಿದ್ದಾರೆʼ ಎಂದು ಬಹಿರಂಗಪಡಿಸಿದ್ದರು.

ಸಿನಿಮಾ ರಂಗಕ್ಕೆ ಧರ್ಮೇಂದ್ರ ಅವರ ಕೊಡುಗೆ ಅಪಾರ:
ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿ ಮರೆದಿದ್ದ ಧರ್ಮೇಂದ್ರ ಅವರು ದಶಕಗಳ ಕಾಲ ಸಿನಿಮಾ ರಂಗವನ್ನ ಆಳಿದ್ದರು ಅಂದ್ರೂ ತಪ್ಪಾಗಲಾರದು. ಸಿನಿಮಾ ರಂಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ, ಇದಕ್ಕೆ ಸಾಕ್ಷಿ ಎನ್ನುವಂತೆ ತನ್ನ ಸಿನಿರಂಗದ ಪ್ರಯಾಣದಲ್ಲಿ ಏನೆಲ್ಲಾ ಅಂದರೂ ಕೂಡ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ʻಶೋಲೆʼ, ʻಚುಪ್ಕೆ ಚುಪ್ಕೆʼ, ʻಸೀತಾ ಔರ್ ಗೀತಾʼ ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಗೆ ಇವರದ್ದಾಗಿತ್ತು.

ಕೊನೆಯ ಸಿನಿಮಾ ‘ಇಕ್ಕೀಸ್’:
ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕೀಸ್’ ಚಿತ್ರದಲ್ಲಿ ಧರ್ಮೇಂದ್ರ ಅವರು ಕೊನೆಯದಾಗಿ ನಟಿಸಿದ್ದರು. ಇದು ಡಿಸೆಂಬರ್‌ 25ರಂದು ತೆರೆ ಕಾಣಬೇಕಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ನಟಿಸುತ್ತಿದ್ದಾರೆ. ‘ಇಕ್ಕೀಸ್’ ಚಿತ್ರದಲ್ಲಿ ಭಾರತದ ಅತಿ ಕಿರಿಯ ಪರಮ ವೀರ ಚಕ್ರ ಪ್ರಶಸ್ತಿ ವಿಜೇತ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಪಾತ್ರದಲ್ಲಿ ಅಗಸ್ತ್ಯ ನಂದ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅರುಣ್ ಅವರ ನಿಜ ಜೀವನದ ಕಥೆಯನ್ನು ಹೇಳಲಾಗುತ್ತಿದೆಯಂತೆ. 2023ರಲ್ಲಿ ತೆರೆಕಂಡ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಸಿಂಗ್, ಶಬಾನಾ ಅಜ್ಮಿ ಮತ್ತು ಆಲಿಯಾ ಭಟ್ ಅವರೊಂದಿಗೆ ಧರ್ಮೇಂದ್ರ ಅವರು ನಟಿಸಿದ್ದರು. 2024ರಲ್ಲಿ ‘ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಶಹೀದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ಧರ್ಮೇಂದ್ರ ಕಾಣಿಸಿಕೊಂಡಿದ್ದರು.