ಉಡುಪಿ: ಭಾರತೀಯ ನೌಕಾಪಡೆಯ ಹಡಗುಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಮಲ್ಪೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ರೋಹಿತ್ (29) ಹಾಗೂ ಸಂತ್ರಿ (37) ಬಂಧಿತ ಆರೋಪಿಗಳು. ಕೇಂದ್ರ ಸರ್ಕಾರ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಡಿಯಲ್ಲಿರುವ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಸಂಸ್ಥೆಗೆ ಸುಷ್ಮಾ ಮರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದಲ್ಲಿ ಈ ಇಬ್ಬರು ಕೆಲಸ ಮಾಡುತ್ತಿದ್ದರು.
ರೋಹಿತ್ ಇನ್ಸುಲೇಟರ್ ಆಗಿ ಈ ಹಿಂದೆ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಕೇರಳದ ಕೊಚ್ಚಿನ್ ಶಿಪ್ಯಾರ್ಡ್ ನಲ್ಲಿ ಭಾರತದ ನೌಕಾ ಪಡೆಗೆ ಸಂಬಂಧಪಟ್ಟ ಹಡಗುಗಳನ್ನು ನಿರ್ಮಾಣ ಮಾಡಲಾಗುತ್ತದೆ. ರೋಹಿತ್ ಕೇರಳದಲ್ಲಿ ಕೆಲಸ ಮಾಡುವಾಗ ನೌಕಾ ಪಡೆಗೆ ಸಂಬಂಧಪಟ್ಟ ಹಡಗುಗಳ ಸಂಖ್ಯೆಗಳ ಪಟ್ಟಿ, ಹಾಗೂ ಇತರ ರೋಹಿತ್ ಕೇರಳದಲ್ಲಿ ಕೆಲಸ ಮಾಡುವಾಗ ನೌಕಾ ಪಡೆಗೆ ಸಂಬಂಧಪಟ್ಟ ಹಡಗುಗಳ ಸಂಖ್ಯೆಗಳ ಪಟ್ಟಿ, ಹಾಗೂ ಇತರ ಗೋಪ್ಯ ಮಾಹಿತಿಯನ್ನು ವಾಟ್ಸ್ ಆ್ಯಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ಗೆ ಬಂದ ನಂತರವೂ ರೋಹಿತ್ ಕೊಚ್ಚಿಯಲ್ಲಿರುವ ಆತನ ಸ್ನೇಹಿತನಿಂದ ಮಾಹಿತಿ ಪಡೆದು, ವಾಟ್ಸ್ ಆ್ಯಪ್ ಮೂಲಕ ಅನಧಿಕೃತ ವ್ಯಕ್ತಿಗೆ ಶೇರ್ ಮಾಡಿ, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ. ಆರೋಪಿಗಳು ಪಾಕಿಸ್ತಾನಕ್ಕೆ ಗೋಪ್ಯ ಮಾಹಿತಿ ಸೋರಿಕೆ ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.
‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಅವರನ್ನು ಕಸ್ಟಡಿಗೆ ಪಡೆದು ಇನ್ನಷ್ಟು ವಿಚಾರಣೆ ನಡೆಸಲಾಗುವುದು’ ಎಂದರು. ಈ ಬಗ್ಗೆ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಸಿಇಒ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


















