ಬೆಂಗಳೂರಿನಲ್ಲಿ ವಾಹನ ಅಡ್ಡಗಟ್ಟಿ 7 ಕೋಟಿ ರೂ. ದರೋಡೆ ಪ್ರಕರಣ: ಪೊಲೀಸ್ ಕಾನ್ಸ್‌ಟೇಬಲ್ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಹಾಡುಹಗಲೇ ನಡೆದ 7 ಕೋಟಿ ರೂಪಾಯಿ ದರೋಡೆ ಪ್ರಕರಣ ಹಿಂದೆ ಪೊಲೀಸ್ ಕಾನ್ಸ್‌ಟೇಬಲ್ ಇದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ದರೋಡೆ ಪ್ರಕರಣ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿದೆ. ಇವರೇ ಆರೋಪಿ ಗ್ಯಾಂಗ್ ನ್ನು ದರೋಡೆ ಹೇಗೆ ಮಾಡಬೇಕೆಂದು ಸಂಚು ರೂಪಿಸಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್, ದರೋಡೆ ಹೇಗೆ ಮಾಡಬೇಕೆಂದು ಹೇಳಿಕೊಟ್ಟಿದ್ದರು. ದರೋಡೆ ನಂತರ ಹೇಗೆ ತಪ್ಪಿಸಿಕೊಳ್ಳಬೇಕೆಂದು ಕೂಡ ತರಬೇತಿ ಕೊಟ್ಟಿದ್ದರು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂದು ಸಹ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡವೇ 7.11 ಕೋಟಿ ರೂಪಾಯಿ ದರೋಡೆ ಮಾಡಿದೆ. ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಯಲ್ಲಿ ಭಾಗಿಯಾಗಿದ್ದು, ಕದ್ದ ಹಣವನ್ನು ಬೆಂಗಳೂರಲ್ಲಿಯೇ ಬಚ್ಚಿಟ್ಟು ಪರಾರಿಯಾಗಿದ್ದಾರೆ ಎಂಬ ವಿಷಯ ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಸೂಚನೆ:
ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆಹಚ್ಚಬೇಕೆಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪೊಲೀಸರಿಗೆ ಸೂಚನೆ ನೀಡಿದ್ದರು. ಈವರೆಗೆ ದರೋಡೆಕೋರರ ಸುಳಿವು ಸಿಕ್ಕಿ ಆರೋಪಿಗಳ ಫೋಟೋ ಬಿಡುಗಡೆ ಮಾಡಲಾಗಿದೆ.