ಜ. 18ರಂದು ಮಂಗಳೂರಿನಲ್ಲಿ ಜಾಗತಿಕ ಬಿಲ್ಲವರ ಕ್ರೀಡೋತ್ಸವ-2026

ಉಡುಪಿ: ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಮಂಗಳೂರು ವತಿಯಿಂದ ಬಿಲ್ಲವ ಸಂಘಟನೆಗಳ ಸಹಯೋಗದಲ್ಲಿ ಇದೇ ಪ್ರಪ್ರಥಮ ಬಾರಿಗೆ ‘ಜಾಗತಿಕ ಬಿಲ್ಲವರ ಕ್ರೀಡೋತ್ಸವ-2026 ‘ ಮುಂಬರುವ ಜ.18ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಸಂಸ್ಥೆಯ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅವರ ನೇತೃತ್ವದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಉಪಾಧ್ಯಕ್ಷ ಕೆ.ಟಿ.ಸುವರ್ಣ ಹಾಗೂ ಕ್ರೀಡಾಕೂಟದ ಮಹಾ ಸಂಚಾಲಕ ಡಾ.ಸಂತೋಷ್ ಭೈರಂಪಳ್ಳಿ ಅವರು, ಈ ಕ್ರೀಡಾ ಪಂದ್ಯಾಟದಲ್ಲಿ ಬಿಲ್ಲವ ಮತ್ತು ಅದರ ಇತರ 26 ಉಪಪಂಗಡದವರಿಗೆ ಭಾಗವಹಿಸಲು ಅವಕಾಶವಿದೆ.

ಬಿಲ್ಲವರ ಎಲ್ಲಾ 26 ಉಪಪಂಗಡಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮುದಾಯದ ಎಲ್ಲಾ ನಾಯಕರನ್ನು ಒಗ್ಗೂಡಿಸಿಕೊಂಡು ಈ ಕ್ರೀಡಾಕೂಟವನ್ನು ಸಂಯೋಜಿಸಲಾಗುತ್ತಿದೆ. ದ.ಕ., ಉಡುಪಿ, ಉತ್ತರ ಕನ್ನಡ ಅಲ್ಲದೆ ದುಬಾಯಿ, ಮಸ್ಕತ್ ಸೇರಿದಂತೆ ವಿಶ್ವವ್ಯಾಪಿಯಲ್ಲಿ ನೆಲೆಸಿರುವ ಬಿಲ್ಲವ ಪ್ರತಿಭೆಗಳಿಗೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ. ಜಿಲ್ಲೆಯ 7 ತಾಲೂಕಿನ ಬಿಲ್ಲವರು ತಂಡವನ್ನು ರಚಿಸಿಕೊಂಡು ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಪಂದ್ಯಾಟದ ಲೋಗೋವನ್ನು ಖ್ಯಾತ ಸಿನಿನಟ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಅವರು ಉಪಸ್ಥಿತರಿರುವರು.

ಪಂದ್ಯಾಟಗಳ ವಿವರ:
ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಹಾಗೆಯೇ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟವಿದೆ. ಪುರುಷರ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 2 ಲಕ್ಷ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 1 ಲಕ್ಷ ರೂ. ನಗದು ಮತ್ತು ಟ್ರೋಪಿ, ತೃತೀಯ 50 ಸಾವಿರ ರೂ.ನಗದು ಮತ್ತು ಟ್ರೋಫಿ, ಚತುರ್ಥ 25 ಸಾವಿರ ರೂ. ನಗದು ಮತ್ತು ಟ್ರೋಫಿನೀಡಲಾಗುವುದು. ಹಾಗೆಯೇ ಮಹಿಳಾ ಕಬ್ಬಡ್ಡಿ, ಥ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ವಿಜೇತರಿಗೆ ಪ್ರಥಮ ಬಹುಮಾನ 1 ಲಕ್ಷ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 50 ಸಾವಿರ ರೂ. ನಗದು ಮತ್ತು ಟ್ರೋಪಿ, ತೃತೀಯ 25 ಸಾವಿರ ರೂ.ನಗದು ಮತ್ತು ಟ್ರೋಪಿ ಹಾಗೂ ಚತುರ್ಥ ಬಹುಮಾನವಾಗಿ 10 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುವುದು. ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ವೈಯುಕ್ತಿಕ ಬಹುಮಾನ ಕೂಡಾ ಇರಲಿದೆ ಎಂದು ಅವರು ತಿಳಿಸಿದರು.

ನೋಂದಣಿಗಾಗಿ ಮೊಬೈಲ್ ಸಂಖ್ಯೆ 9242783800 ಅನ್ನು ಸಂಪರ್ಕಿಸಬಹುದು. ನ.31 ನೋಂದಣಿಗೆ ಕಡೆ ದಿನವಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟದ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಹಿರಿಯ ಕಬಡ್ಡಿ ಆಟಗಾರ್ತಿ ಅಮಿತಾ ನಿತ್ಯಾನಂದ, ಮಿಥುನ್ ಅಮೀನ್, ಶಬರಿ ಸುವರ್ಣ, ಗಣೇಶ್ ಕೋಟ್ಯಾನ್, ಲಕ್ಷ್ಮಣ ಪೂಜಾರಿ, ಬನ್ನಂಜೆ ಬಿಲ್ಲವ ಸಂಘದ ಪದಾಧಿಕಾರಿ ವಿಶ್ವನಾಥ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಪದಾಧಿಕಾರಿ ಸುಕುಮಾರ್ ಉಪಸ್ಥಿತರಿದ್ದರು.