ಉಡುಪಿ: ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳಾದ ಜನಿವಾರ ಮತ್ತು ಕೈದಾರ(ರಕ್ಷಾಸೂತ್ರ)ಗಳನ್ನು ಬಲವಂತವಾಗಿ ತೆಗೆಸಿ ದೈಹಿಕ ಶಿಕ್ಷೆಗೆ ಒಳಪಡಿಸಿದ್ದಾರೆಯೆಂಬ ಗಂಭೀರ ಆರೋಪ ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ವಿರುದ್ಧ ಕೇಳಿಬಂದಿದೆ. ಪೋಷಕರು ಹಾಗೂ ಗ್ರಾಮಸ್ಥರ ಆಕ್ರೋಶದ ನಡುವೆ, ಶಾಲಾ ಪ್ರಾಂಶುಪಾಲರು ಸಂಬಂಧಿತ ಶಿಕ್ಷಕರನ್ನು ಕರ್ತವ್ಯದಿಂದ ವಜಾಗೊಳಿಸಿರುವುದು ತಿಳಿದುಬಂದಿದೆ.
ಹಿಂದೂ ಜನಜಾಗೃತಿ ಸಮಿತಿಯು ಈ ಕೃತ್ಯವನ್ನು ಮಕ್ಕಳ ಹಕ್ಕುಗಳ ಸಂರಕ್ಷಣಾ ಅಧಿನಿಯಮಗಳ ಉಲ್ಲಂಘನೆ ಎಂದು ಗುರುತಿಸಿ, ತಕ್ಷಣ FIR ದಾಖಲಿಸಿ ಬಂಧನ ಕ್ರಮ ಕೈಗೊಳ್ಳುವಂತೆ ತಾಲೂಕು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಸಮಿತಿಯು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಅನೇಕ ಧರ್ಮ ಪ್ರೇಮಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಬಾಲಕೃಷ್ಣ ನಾಯಕ್ ಮಾತನಾಡಿ, ಮಕ್ಕಳ ಧಾರ್ಮಿಕ ಸಂವೇದನೆ, ನಂಬಿಕೆ, ಸಂಸ್ಕಾರಗಳಿಗೆ ಧಕ್ಕೆ ತರುವ ಈ ರೀತಿಯ ವರ್ತನೆ ಅತ್ಯಂತ ಕ್ರೂರವಾಗಿದೆ ಹಾಗೂ ಇದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಈ ಶಿಕ್ಷಕನ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಬೇಕಾಗಿ ಸಮಿತಿಯು ಒತ್ತಿ ಹೇಳಿದೆ.


















