ಹಿರಿಯಡ್ಕ: ಬಸ್ಸೊಂದು ಚರಂಡಿಗೆ ಬಿದ್ದು ಅಲ್ಲೇ ಸಮೀಪದ ಹೊಟೇಲ್ ಜಖಂಗೊಳಿಸಿದ ಘಟನೆ ಓಂತಿಬೆಟ್ಟು ಎಂಬಲ್ಲಿ ನ.18ರಂದು ರಾತ್ರಿ ವೇಳೆ ನಡೆದಿದೆ. ಚಾಲಕ ವಿಪರೀತ ಮದ್ಯ ಸೇವಿಸಿ ಚಾಲನೆ ಮಾಡಿದ್ದರಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಚಾಲಕ ವಿಜಯಪುರದ ಮಹಾಂತೇಶ ಆನಂದಗೌಡ ಪಾಟೀಲ(34) ಎಂಬಾತ ವಿಪರೀತ ಮದ್ಯ ಸೇವಿಸಿ ಪ್ರಯಾಣಿಕರಿರುವ ಬಸ್ಸನ್ನು ಮಣಿಪಾಲ ಕಡೆಯಿಂದ ಹಿರಿಯಡಕ ಕಡೆಗೆ ಚಲಾಯಿಸಿಕೊಂಡು ಬಂದು ಬಸ್ ನಿಯಂತ್ರಿಸದೇ ಚರಂಡಿಗೆ ನುಗ್ಗಿಸಿ ಹೋಟೆಲೊಂದರ ಬೋರ್ಡ್ ಮತ್ತು ಬಸ್ಸನ್ನು ಜಖಂಗೊಳಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರ ನರ ಹತ್ಯೆಗೆ ಪ್ರಯತ್ನಿಸಿ ಘೋರ ಅಪರಾಧ ಎಸಗಿರುವುದಾಗಿ ದೂರಲಾಗಿದೆ.
ಈ ಬಸ್ ಕುಂದಾಪುರದಿಂದ ಬೆಂಗಳೂರಿಗೆ ಹೆಬ್ರಿ-ಶಿವಮೊಗ್ಗ ರಸ್ತೆ ಘಾಟಿ ಪ್ರದೇಶದಲ್ಲಿ ಹೋಗಬೇಕಿದ್ದು, ರಸ್ತೆಯು ತುಂಬಾ ತಿರುವುಗಳಿಂದ ಕೂಡಿರುವುದರಿಂದ ಬಸ್, ನಿಯಂತ್ರಣ ತಪ್ಪಿ ರಸ್ತೆ ಬದಿ ಪ್ರಪಾತಕ್ಕೆ ಬಿದ್ದಿದ್ದರೆ ದೊಡ್ಡ ದುರಂತ ಸಂಭವಿಸುತ್ತಿತ್ತು ಎಂದು ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















