ಭಾರತದ ಬೆಳವಣಿಗೆ ಇಡೀ ಜಗತ್ತಿಗೆ ಮಾದರಿ: ಪ್ರಧಾನಿ ಮೋದಿ

ದೆಹಲಿ: ಕೇಂದ್ರ ಸರ್ಕಾರವಾಗಲಿ ಅಥವಾ ಪ್ರಾದೇಶಿಕ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳಿರಲಿ, ಆಡಳಿತ ನಡೆಸುವವರ ಮೊದಲ ಆದ್ಯತೆ ಅಭಿವೃದ್ಧಿಯಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎಕ್ಸ್‌ಪ್ರೆಸ್‌ ಗ್ರೂಪ್‌ ಆಯೋಜಿಸಿದ್ದ ಆರನೇ ರಾಮನಾಥ್ ಗೋಯೆಂಕಾ ಉಪನ್ಯಾಸದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಚುನಾವಣಾ ಫಲಿತಾಂಶ, ಜನರ ಆಕಾಂಕ್ಷೆಗಳು ಹೆಚ್ಚಿವೆ, ಒಳ್ಳೆಯ ಉದ್ದೇಶಗಳನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಮತದಾರ ನಂಬುತ್ತಾನೆ ಎನ್ನುವ ಪಾಠವನ್ನು ಕಲಿಸಿದೆ ಎಂದರು.

ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಸ್ಪರ್ಧೆಯ ಮನೋಭಾವವನ್ನು ಬೆಳೆಸಲು ನಾನು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ, ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸಲು ಸ್ಪರ್ಧೆಗಳನ್ನು ಆಯೋಜಿಸುವುದು ಉತ್ತಮ ಹೆಜ್ಜೆಯಾಗಬಹುದು ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕೆ ದಿನದ 24 ಗಂಟೆ ಕೆಲಸ ಮಾಡುವ ಬದ್ಧತೆ ಹೊಂದಿರುವುದರಿಂದಲೇ ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಹೇಳಿದರು.

ಭಾರತದ ಬೆಳವಣಿಗೆಯನ್ನು ಇಡೀ ಜಗತ್ತು ಭರವಸೆಯ ಮಾದರಿಯಾಗಿ ನೋಡುತ್ತಿದೆ, ಜಾಗತಿಕ ಅಸ್ಥಿರತೆಗಳ ಹೊರತಾಗಿಯೂ ನಮ್ಮ ಜಿಡಿಪಿ ಸುಮಾರು ಏಳು ಪ್ರತಿಶತದಷ್ಟು ಬೆಳೆಯುತ್ತಿದೆ, ಭಾರತವು ಕೇವಲ ಉದಯೋನ್ಮುಖ ಮಾರುಕಟ್ಟೆಯಲ್ಲ, ಉದಯೋನ್ಮುಖ ಮಾದರಿಯೂ ಆಗಿದೆ ಎಂದು ಹೇಳಿದರು.

ಇಂದು ಬಿಹಾರದಲ್ಲಿ ಆಗುತ್ತಿರುವುದನ್ನು ನಾವು ನೋಡಿದ್ದೇವೆ, ಸೌರ ದೀಪಗಳಿಂದ ಬೆಳಗುತ್ತಿರುವ ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಸಂಪರ್ಕ ಹೊಂದಿರುವ ಹಳ್ಳಿಗಳನ್ನು ಕಾಣುತ್ತಿದ್ದೇವೆ, ಲಾಲು ಪ್ರಸಾದ ಯಾದವ್ ಮನಸ್ಸು ಮಾಡಿದ್ದರೆ ಬಿಹಾರಕ್ಕಾಗಿ ಸಾಕಷ್ಟು ಕೆಲಸ ಮಾಡಬಹುದಿತ್ತು, ಆದರೆ ಅವರು ಜಂಗಲ್‌ ರಾಜ್‌ಗೆ ಆದ್ಯತೆ ನೀಡಿದರು ಎಂದು ಹೇಳಿದರು.