ಅಂಕೋಲ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಚಾಲಕ ಗಂಭೀರ

ಅಂಕೋಲ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನ ಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದೆ. ಹೆದ್ದಾರಿಯಲ್ಲಿ ಎಥೆನಾಲ್ ಗ್ಯಾಸ್ ಸೋರಿಕೆಯಾಗುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಗುಜರಾತ್ ನಿಂದ ಉಡುಪಿ‌ ಕಡೆ ಹೋಗುತಿದ್ದ ಗ್ಯಾಸ್ ಟ್ಯಾಂಕರ್ ಅಂಕೋಲದ ಕಂಚಿನ ಬಾಗಿಲು ಸಮೀಪ ಪಲ್ಟಿಯಾಗಿದೆ. ಮಹಾರಾಷ್ಟ್ರ ಮೂಲದ ಚಾಲಕ ಅರುಣ್ ಶೇಖ್ (57) ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ NDRF ತಂಡದಿಂದ ಕಾರ್ಯಾಚರಣೆ ಮುಂದುವರಿದೆ.

ಅಂಕೋಲಾ ತಹಶೀಲ್ದರ್ ಚಿಕ್ಕಪ್ಪ ನಾಯಕ್ ಸೇರಿದಂತೆ ತಾಲೂಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ‌. ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಲಾಗಿದೆ.