ಕುಂದಾಪುರ: ಸಾಮಾಜಿಕ ಜಾಲತಾಣ ಮುಗ್ದ ಜನರನ್ನು ಎಷ್ಟು ದಾರಿತಪ್ಪಿಸುತ್ತೆ ಅನ್ನೋದಕ್ಕೆ ಕಿಡಿಗೇಡಿಗಳು ಬರೆದ ಸಂದೇಶ ನಂಬಿ ಕುಂದಾಪುರ ಮಿನಿವಿಧಾನಸೌಧಕ್ಕೆ ಬಂದ ಜನರೇ ಸಾಕ್ಷಿ. ಋಣಮುಕ್ತ ಕಾಯ್ದೆಗೆ ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾದ ಹಿನ್ನೆಲೆ ಸೋಮವಾರದಂದು ಕುಂದಾಪುರದ ಮಿನಿವಿಧಾನಸೌದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅರ್ಜಿ ಸಲ್ಲಿಸಿದ ದೃಶ್ಯ ಕಂಡುಬಂದಿತು. ಆದರೆ ಬಂದವರ ಪೈಕಿ ಬಹುತೇಕರು ಸೊಸೈಟಿ (ಸಹಕಾರಿ ಸಂಘ), ಮಾನ್ಯತೆಯಿರುವ ಹಾಗೂ ಆರ್.ಬಿ.ಐ. ಮತ್ತು ಸಹಕಾರಿ ನಿಯಮ ನಿಬಂಧನೆಗೊಳಪಟ್ಟ ಸಂಸ್ಥೆಗಳಲ್ಲಿ ಪಡೆದ ಸಾಲ ಮನ್ನಾ ಆಗುವ ನಂಬಿಕೆಯಲ್ಲಿ ಬಂದು ಅರ್ಜಿ ಸಲ್ಲಿಸಿದರು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹಕಾರಿ ಸಂಘದಲ್ಲಿ ಅಡಮಾನ ಇಟ್ಟ ಚಿನ್ನಾಭರಣವೂ ಕೂಡ ಋಣಮುಕ್ತ ಕಾಯ್ದೆಯಲ್ಲಿ ಮನ್ನಾ ಆಗಲಿದೆ ಎಂಬ ಸುಳ್ಳು ಸುದ್ದಿ ನಂಬಿದ ಸಾವಿರಾರು ಮಂದಿ ಕುಂದಾಪುರದಲ್ಲಿರುವ ಮಿನಿ ವಿಧಾನ ಸೌಧಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಇಡೀ ಉಡುಪಿ ಜಿಲ್ಲೆಗೆ ಕುಂದಾಪುರದಲ್ಲಿ ಮಾತ್ರವೇ ಉಪವಿಭಾಗಾಧಿಕಾರಿ ಕಚೇರಿಯಿದೆ. ಋಣಮುಕ್ತ ಕಾಯ್ದೆ ಅರ್ಜಿಯನ್ನು ಉಪವಿಭಾಗಾಧಿಕಾರಿ ಕಚೇರಿಯಲ್ಲೇ ನೀಡಬೇಕಿರುವ ಹಿನ್ನಲೆ ಕುಂದಾಪುರಿಗರು ಮಾತ್ರವಲ್ಲದೇ ಉಡುಪಿ, ಕಾಪು, ಪಡುಬಿದ್ರೆ, ಕಾರ್ಕಳ, ಬೈಂದೂರು ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಕಚೇರಿ ಸನಿಹದ ಬಳಿಯ ಅಂಗಡಿಮುಂಗಟ್ಟುಗಳಲ್ಲಿ ಋಣಮುಕ್ತ ಪತ್ರದ ಅರ್ಜಿಗಾಗಿ ಜನರು ಮುಗಿಬಿದ್ದಿದ್ದಾರೆ. ಅರ್ಜಿ ತುಂಬಿಸುವರಿಗೂ ಸಖತ್ ಡಿಮ್ಯಾಂಡ್ ಇತ್ತು. ಅರ್ಜಿ ತುಂಬಿಸಿದವರು ೩೦-೭೦ ರೂ. ತನಕ ಹಣ ಪಡೆದರು. ಇನ್ನು ಸಾಗರೋಪಾದಿಯಲ್ಲಿ ಜನರು ಬಂದಿದ್ದರಿಂದ ಕುಂದಾಪುರ ಹೊಸ ಬಸ್ ನಿಲ್ದಾಣ ಬಳಿ ಜನದಟ್ಟಣೆ ಏರ್ಪಟ್ಟು ಟ್ರಾಫಿಕ್ ಜಾಮ್ ಕೂಡ ಆಗಿತ್ತು.
ಏನಿದು ಋಣ ಮುಕ್ತ ಕಾಯ್ದೆ?
ವಾರ್ಷಿಕವಾಗಿ ೧ ಲಕ್ಷ ೨೦ ಸಾವಿರ ರೂ. ಆದಾಯಕ್ಕಿಂತ ಕಡಿಮೆ ಹೊಂದಿದ ರೈತರು, ಸಣ್ಣ ರೈತರು, ಭೂಮಿ ಇಲ್ಲದ ರೈತರು ಮತ್ತು ಕಾರ್ಮಿಕರು, ದುರ್ಬಲ ವರ್ಗದ ಮಂದಿ ಮತ್ತು ಯಾವುದೇ ಇತರೇ ಯಾವ ಮೂಲದಿಂದಲೂ ಆದಾಯವಿಲ್ಲದವರು ಈ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಅರ್ಹರು. ಆದರೆ ಬ್ಯಾಂಕುಗಳು, ಸರಕಾರಿ ಕಂಪೆನಿ, ಸಹಕಾರಿ ಸಂಘ, ಸೌಹಾರ್ಧ ಸಹಕಾರಿ ಸಂಘ, ಎಲ್.ಐ.ಸಿ. (ಭಾರತೀಯ ಜೀವಾ ವೀಮಾ ನಿಗಮ) ಸೇರಿದಂತೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ೧೯೬೦ ಅಧಿನಿಯಮ ೧೭ರಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಲ್ಲಿ ಪಡೆದ ಮಂದಿ ಈ ಸೌಲಭ್ಯ ಪಡೆಯಲಾಗುವುದಿಲ್ಲ. ಇದು ಋಣಮುಕ್ತ ಕಾಯ್ದೆಯ ನಿಯಮಗಳು.
ಇನ್ನು ಈ ಕಾಯ್ದೆ ಹೀಗಿದೆ…..ನೀವು ನಿಮ್ಮ ಸಮಯ ಹಾಗೂ ಹಣ ವ್ಯಯ ಮಾಡಬೇಡಿ..ನೋಂದಾವಣೆಯಿಲ್ಲದ ಲೇವಾದೇವಿ ವ್ಯವಹಾರಸ್ಥರಿಂದ ಪಡೆದ ಹಣದ ಬಗ್ಗೆ ಮಾತ್ರವೇ ಅರ್ಜಿ ಸಲ್ಲಿಸಿ ಎಂದು ಸೋಮವಾರ ಬೆಳಿಗ್ಗೆ ಮಿನಿವಿಧಾನಸೌಧ ಆವರಣದಲ್ಲಿ ಅಧಿಕಾರಿಗಳು, ಪ್ರಜ್ಞಾವಂತ ನಾಗರಿಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿದರೂ ಕೂಡ ಜನರು ಮಾತ್ರ ಯಾರೊಬ್ಬರ ಮಾತನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಈಗಾಗಾಲೇ ಐದು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಇಂದು ಮತ್ತೆ ನಾಳೆ ಅರ್ಜಿ ಸಲ್ಲಿಕೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ. ರಿಜಿಸ್ಟರ್ ಮಾಡಿದ ಮತ್ತು ಸಹಕಾರಿ ಸಂಘದ ಕಾಯ್ದೆಯಡಿ ಬರುವ ಜನರು ಅನಗತ್ಯ ಗೊಂದಲಕ್ಕೀಡಾಗಬಾರದು ಎಂದಿದ್ದಾರೆ.
ಒಟ್ಟಿನಲ್ಲಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುಳ್ಳು ಸುದ್ದಿಯನ್ನು ಸತ್ಯ ಎಂದು ನಂಬಿ ಬಂದ ಹಳ್ಳಿಗಾಡಿನ ಜನರು, ವೃದ್ದರು, ಗರ್ಭಿಣಿಯರು, ಆ ಕಚೇರಿ- ಈ ಕಚೇರಿ ಅಂತೆಲ್ಲಾ ಅಲೆದಾಡುತ್ತಿದ್ದಾರೆ. ಇನ್ನೂ ಕೆಲವರು ಮಿನಿವಿಧಾನ ಸೌಧದಲ್ಲಿ ಅರ್ಜಿಗಳನ್ನೆಲ್ಲಾ ತುಂಬಿಸಿ ಸರತಿ ಸಾಲಿನಲ್ಲಿ ನಿಂತು ಸಿಬ್ಬಂದಿಗಳಿಗೆ ಹಸ್ತಾಂತರಿಸುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಹಳ್ಳಿಗಾಡಿನ ಮುಗ್ಧ ಜನರು ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ.