ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆವಿಷ್ಕಾರ್ 2025- ವಿಜ್ಞಾನ ಉತ್ಸವ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪದವಿಪೂರ್ವ ಮತ್ತು ಫ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಆವಿಷ್ಕಾರ್ 2025 ವಿಜ್ಞಾನ ಉತ್ಸವವನ್ನು ದಿನಾಂಕ 15 ನವಂಬರ್ 2025ರಂದು ಆಯೋಜಿಸಲಾಗಿತ್ತು.

ಯುವ ಮನಸ್ಸುಗಳಲ್ಲಿ ಕುತೂಹಲವನ್ನು ಹುಟ್ಟುಹಾಕಲು ಮತ್ತು ಪ್ರಾಯೋಗಿಕ ವೈಜ್ಞಾನಿಕ ಪರಿಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮವು ವಿಜ್ಞಾನ ಮಾದರಿ ಪ್ರದರ್ಶನ, ವಿಜ್ಞಾನ ರಸಪ್ರಶ್ನೆ ಮತ್ತು ಕಿರು ವೀಡಿಯೋ ತಯಾರಿಕೆ ಸ್ಪರ್ಧೆ ಮೊದಲಾದ ಹಲವು ಸ್ಪರ್ಧೆಗಳನ್ನು ಒಳಗೊಂಡಿತ್ತು.

ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರತೀಕ್ ಬಯ್ಯಲ್ ಐ. ಎ. ಎಸ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದರು. ಯುವ ವೈಜ್ಞಾನಿಕ ಮನಸ್ಸುಗಳನ್ನು ಪೋಷಿಸುವಲ್ಲಿ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಉಡುಪಿ ಕೋಟಾದ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ ಜಗದೀಶ್ ನಾವಡ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ವಿದ್ಯಾಸಂಸ್ಥೆಗಳ ಸಹಯೋಗದ ಮಹತ್ವವನ್ನು ತಿಳಿಸಿದರು.

ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾ ಅಧಿಕಾರಿ ಡಾ.ಉದಯ ಶೆಟ್ಟಿ ಮತ್ತು ಯೋಜನಾ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್, ಕೆಎಎಸ್ ಉಪಸ್ಥಿತರಿದ್ದರು. ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಭವಿಷ್ಯದ ಪೀಳಿಗೆಯಿಂದ ನವೀನ ಯೋಜನೆಯನ್ನು ನಿರ್ಮಿಸುವಲ್ಲಿನ ಮಹತ್ವವನ್ನು ಒತ್ತಿ ಹೇಳಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವ ಮನಸ್ಸುಗಳು ತಮ್ಮ ಜ್ಞಾನವನ್ನು ಉತ್ಕೃಷ್ಟಗೊಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 500 ಕ್ಕೂ ಹೆಚ್ಚು ಪದವಿಪೂರ್ವಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಸ್ಥೆಯ ಶೈಕ್ಷಣ ಕ ಡೀನ್ ಡಾ. ನಾಗರಾಜ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಂಯೋಜಕರೂ ಆದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಕುಮಾರಿ ವಿಂಧ್ಯಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ದೀಪಾ ಡಿ ಪ್ರಭು ಮತ್ತು ಚಿರಶ್ರೀ ನಿರೂಪಿಸಿದರು.