ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೆರೆಕಟ್ಟೆ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ಜನಪ್ರಿಯ ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣ ಮಾರ್ಗಗಳಿಗೆ ಕಾಡಾನೆಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ನ.17ರಿಂದ ನ.19ರವರೆಗೆ ಪ್ರವಾಸಿಗರಿಗೆ ಈ ಎರಡೂ ಚಾರಣ ಮಾರ್ಗಗಳಿಗೆ ಪ್ರವೇಶ ಅವಕಾಶ ಇರುವುದಿಲ್ಲ. ಅರಣ್ಯ ಇಲಾಖೆ ಹೊರಡಿಸಿರುವ ಅಧಿಕೃತ ಜಾವನಾ ಪತ್ರದಲ್ಲಿ, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣಗಳು ಪ್ರಕೃತಿ ಸೌಂದರ್ಯ, ದಟ್ಟ ಅರಣ್ಯ ಮಾರ್ಗಗಳು, ಕಾಡಿನ ಜೀವ ವೈವಿಧ್ಯವನ್ನು ಸಮೀಪದಿಂದ ಅನುಭವಿಸುವ ಅವಕಾಶಗಳಿಂದ ಪ್ರಸಿದ್ಧವಾಗಿವೆ. ವಿಶೇಷವಾಗಿ ನರಸಿಂಹಪರ್ವತ ಶಿಖರದಿಂದ ಕಾಣುವ ಪಶ್ಚಿಮಘಟ್ಟದ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಅಂಶ. ವಾಲಿಕುಂಜ ಮಾರ್ಗದಲ್ಲಿನ ನಿಷ್ಕಳಂಕ ಕಾಡು, ಹರಿವ ನೀರಿನ ಹರಿವು, ಹಸಿರಿನ ನಿಸರ್ಗ ಪ್ರವಾಸಾಸಕ್ತರಿಗೆ ವಿಶಿಷ್ಟ ಅನುಭವ ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಚಲನವಲನ ಈ ಪ್ರದೇಶದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಅಪಾಯ ತಪ್ಪಿಸಲು ತಾತ್ಕಾಲಿಕವಾಗಿ ಚಾರಣವನ್ನು ನಿಲ್ಲಿಸಲಾಗಿದೆ. ಪರಿಸ್ಥಿತಿ ಸಾಮಾನ್ಯಗೊಂಡ ನಂತರ ಪ್ರವೇಶವನ್ನು ಮರುಪ್ರಾರಂಭಿಸುವ ಬಗ್ಗೆ ತಿಳಿಸಲಾಗುವುದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

















