ಮಂಗಳೂರು: ಪಣಂಬೂರು ಸಿಗ್ನಲ್ ನಲ್ಲಿ ಬಳಿ ನಿಂತಿದ್ದ ವಾಹನಗಳಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನಪ್ಪಿದ ಘಟನೆ ನಡೆದಿದೆ.
ಪಣಂಬೂರು ಸಿಗ್ನಲ್ ಬಳಿ ವಾಹನಗಳು ಸಿಗ್ನಲ್ ಗಾಗಿ ಕಾಯುತ್ತಿದ್ದ ವೇಳೆ ವೇಗವಾಗಿ ಬಂದ ಟ್ಯಾಂಕರ್ ಹಿಂದಿನಿಂದ ಆಟೊ ರಿಕ್ಷಾ ಮತ್ತು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಸಿಗ್ನಲ್ ನಲ್ಲಿ ನಿಂತಿದ್ದ ಟ್ಯಾಂಕರ್ ವೊಂದರ ಹಿಂಭಾಗದಲ್ಲಿ ಕಾರು ಮತ್ತು ಆಟೊ ರಿಕ್ಷಾ ನಿಂತಿತ್ತು. ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ.
ಈ ವೇಳೆ ಆಟೊ ರಿಕ್ಷಾ ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


















