ಬಿಹಾರ ಚುನಾವಣೆಯಲ್ಲಿ ಬಿಜೆಪಿ ವಿಜಯ: ಮೈಥಿಲಿ ಠಾಕೂರ್ ಅತ್ಯಂತ ಕಿರಿಯ ಶಾಸಕಿ!

ಪಾಟ್ನಾ: ಬಿಹಾರ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ರಾಜಕೀಯ ಪ್ರವೇಶ ಮಾಡಿದ್ದ ಖ್ಯಾತ ಜಾನಪದ ಮತ್ತು ಭಕ್ತಿಗೀತೆ ಗಾಯಕಿ ಮೈಥಿಲಿ ಠಾಕೂರ್, ದರ್ಭಾಂಗ್ ಜಿಲ್ಲೆಯ ಅಲಿನಗರ ಕ್ಷೇತ್ರದಿಂದ ಗೆದ್ದದ್ದಾರೆ. ಕೇವಲ 25 ವರ್ಷ ವಯಸ್ಸಿನ ಮೈಥಿಲಿ ಬಿಹಾರದ ಅತ್ಯಂತ ಕಿರಿಯ ಶಾಸಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮೊದಲ ಬಾರಿಗೆ ಅಲಿನಗದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೈಥಿಲಿ, ಆರ್​ಜೆಡಿ ಅಭ್ಯರ್ಥಿ ವಿನೋದ್ ಮಿಶ್ರಾ ಅವರನ್ನು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಾರೆ. ಗಮನಾರ್ಹವಾಗಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಅಲಿನಗರದಲ್ಲಿ ಹಿಂದೆ ಎಂದೂ ಬಿಜೆಪಿ ಗೆದ್ದಿರಲಿಲ್ಲ.

ಬಿಹಾರದಲ್ಲಿ ಈವರೆಗೂ ರಾಜ್ಯದ ಅತ್ಯಂತ ಕಿರಿಯ ಶಾಸಕಿ ತೌಸೀಫ್ ಆಲಂ ಆಗಿದ್ದರು. 2005ರಲ್ಲಿ ಅವರು 26ನೇ ವಯಸ್ಸಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2015ರಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಅದೇ ವಯಸ್ಸಿನಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಈಗ ಮೈಥಿಲಿ ಕೂಡ 25ನೇ ವಯಸ್ಸಿನಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

2000 ಜುಲೈ 25ರಂದು ಮಧುಬನಿಯಲ್ಲಿ ಜನಿಸಿದ್ದ ಮೈಥಿಲಿ, ಬಳಿಕ ಆರ್ಥಿಕ ತೊಂದರೆಯಿಂದಾಗಿ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತ್ತು. ದೆಹಲಿಯ ನಜಾಫ್​ಗಢದಲ್ಲಿ ಮೈಥಿಕ ಬೆಳೆದು ಶಿಕ್ಷಣ ಪೂರೈಸಿದ್ದಾರೆ. ಬಳಿಕ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಗೀತೆಯಲ್ಲಿ ತರಬೇತಿ ಪಡೆದು ಹೆಸರುವಾಸಿಯಾಗಿದ್ದಾರೆ. ಜಾನಪದ ಸಂಗೀತಕ್ಕೆ ಅವರು ನೀಡಿದ ಸೇವೆಗಾಗಿ, 2021ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.