ಸಂಘ-ಸಂಸ್ಥೆಯ ಬೆಳವಣಿಗೆಗೆ ಹಿರಿಯರ ಮಾರ್ಗದರ್ಶನ ಮುಖ್ಯ: ಜಯರಾಮ್ ಆಚಾರ್ಯ

ಉಡುಪಿ: ಹಿರಿಯರ ಅನುಭವ, ಮಾರ್ಗದರ್ಶನದೊಂದಿಗೆ ಮುನ್ನಡೆದಲ್ಲಿ ಸಂಘ ಸಂಸ್ಥೆಗಳ ಏಳ್ಗೆ ಸಾಧ್ಯ ಎಂದು ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ. ಜಯರಾಮ್‌ ಆಚಾರ್ಯ ಹೇಳಿದರು.
ಚಿಟ್ಟಾಡಿ ವಿಶ್ವಕರ್ಮ ಸೇವಾ ಸಂಘದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಯಾವುದೇ ಸಂಘ ಸಂಸ್ಥೆಗಳ ಬೆಳವಣಿಗೆ ಆಗಬೇಕಿದ್ದರೆ ಅಲ್ಲಿ ಒಗ್ಗಟ್ಟು ಮುಖ್ಯ. ಕೇವಲ ಪದಾಧಿಕಾರಿಗಳು ಮಾತ್ರ ಜವಾಬ್ದಾರಿ ತೆಗೆದುಕೊಳ್ಳದೆ ಸದಸ್ಯರೆಲ್ಲರೂ ಒಟ್ಟಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾದರಿ ಸಂಸ್ಥೆಯನ್ನಾಗಿ ರೂಪಿಸಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಸುಧಾಕರ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸ್ವರ್ಣೊದ್ಯಮಿ ಪರ್ಕಳ ಗೋಪಾಲಕೃಷ್ಣ ಆಚಾರ್ಯ, ಸಂಘದ ಗೌರವಾಧ್ಯಕ್ಷ ಶೇಖರ ಆಚಾರ್ಯ, ಉಪಾಧ್ಯಕ್ಷರಾದ ಜನಾರ್ದನ ಆಚಾರ್ಯ, ಸತೀಶ ಆಚಾರ್ಯ, ಮಹೇಶ ಆಚಾರ್ಯ, ಕಾಳಿಕಾಂಬಾ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಉಷಾ ಭಾಸ್ಕರ್‌, ಅಧ್ಯಕ್ಷೆ ಯಶೋಧ ಗಂಗಾಧರ್‌, ಪ್ರಧಾನ ಕಾರ್ಯದರ್ಶಿ ರಾಜೇಶ ಎಸ್‌. ಆಚಾರ್ಯ, ಕೋಶಾಧಿಕಾರಿ ಅಶೋಕ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ಸ್ಥಾನ ಪಡೆದ ಅಂಕಿತ ಪಿ. ಆಚಾರ್ಯ ಹಾಗೂ ಯುಕ್ತ ಆಚಾರ್ಯ, ದೀಕ್ಷಾ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಹರೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.