ಉಡುಪಿ: ಯೋಗದಿಂದ ಸದೃಢ ಆರೋಗ್ಯ ಸದೃಢ ಆರೋಗ್ಯ ಕಾಪಾಡಲು ಸಾಧ್ಯ. ಪ್ರತಿದಿನ ಯೋಗಾಭಾಸ್ಯ ಮಾಡುವುದರಿಂದ
ಕಾಯಿಲೆ ಮುಕ್ತರಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಯೋಗದ ಲಾಭ ಪಡೆದುಕೊಳ್ಳಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ನ. 16ರಿಂದ 20ರ ವರೆಗೆ ರಾಮ್‌ದೇವ್ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆಯುವ ಐದು ದಿನಗಳ ಯೋಗ ಶಿಬಿರದ ಪೂರ್ವಭಾವಿಯಾಗಿ ಶ್ರೀಕೃಷ್ಣಮಠದ ಕನಕಮಂಟಪದಲ್ಲಿ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ಭಾರತಕ್ಕಿಂತಲೂ ವಿದೇಶಿಗರು ಹೆಚ್ಚು ಯೋಗಾಸನದ ಲಾಭವನ್ನು ಪಡೆಯುತ್ತಿದ್ದು, ಭಾರತೀಯರು ಹಿಂದುಳಿದಿದ್ದಾರೆ. ಆದ್ದರಿಂದ ನಮ್ಮ ದೇಶದಲ್ಲೂ ಯೋಗದ ಬೇಡಿಕೆಯನ್ನು ವೃದ್ಧಿಸುವ ಕೆಲಸ ಆಗಬೇಕಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಯೋಗವು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಮಹತ್ವ ಹೊಂದಿದೆ. ಕಾಯಿಲೆಗಳನ್ನು ದೂರ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಶಕ್ತಿಯೂ ಇದಕ್ಕಿದೆ. ಹಾಗಾಗಿ ಪ್ರತಿಯೊಬ್ಬರೂ ರಾಮ್‌ದೇವ್ ನೇತೃತ್ವದಲ್ಲಿ ನಡೆಯುವ ಯೋಗ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಬೇಕು ಎಂದರು.
ಉಡುಪಿಗೆ ಬರಲಿದೆ ಯೋಗಗಂಗೆ ಯೋಗಗುರು ಬಾಬಾ ರಾಮ್‌ದೇವ್ ಅವರು ಈವರೆಗೆ 2.5 ಕೋಟಿ ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಹರಿದ್ವಾರದ ಯೋಗಗಂಗೆ ಉಡುಪಿಗೆ ಬರುತ್ತಿದ್ದು, ಇದನ್ನು ಆನಂದೋತ್ಸವವಾಗಿ ಪರಿವರ್ತಿಸಬೇಕು. ಈಗಾಗಲೇ ಏಳು ಶಿಕ್ಷಕರು ವಿವಿಧೆಡೆ ಶಿಬಿರಗಳನ್ನು ನಡೆಸಿದ್ದಾರೆ. ನ. 1ರಿಂದ ರಾಜ್ಯದ ವಿವಿಧೆಡೆಗಳಲ್ಲಿರುವ ಯೋಗ ಶಿಕ್ಷಕರು ಉಡುಪಿಗೆ ಬರಲಿದ್ದಾರೆ ಎಂದು ಕರ್ನಾಟಕದ ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ತಿಳಿಸಿದರು.
ಹೆಚ್ಚುವರಿ ಟ್ರಿಪ್ ಓಡಿಸಿ:
ಜಿಲ್ಲೆಯಲ್ಲಿ ಕನಿಷ್ಠ 101 ಶಿಬಿರಗಳನ್ನು ನಡೆಸಬೇಕೆಂಬ ಉದ್ದೇಶ ಹೊಂದಿದ್ದು, ಇದು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ 34 ಕಡೆ ಶಿಬಿರಗಳು ನಡೆದಿವೆ. 2011ರಲ್ಲಿ ನಡೆದ ಯೋಗ ಶಿಬಿರದಲ್ಲಿ ಸಿಟಿ ಬಸ್ ಮಾಲೀಕರು ಬೆಳಿಗ್ಗೆ 4ಗಂಟೆಗೆ ಮಲ್ಪೆ, ಕಲ್ಯಾಣಪುರ,
ಪರ್ಕಳ ಮೊದಲಾದೆಡೆಗಳಿಂದ ಬಸ್‌ಗಳನ್ನು ಓಡಿಸಿದಂತೆ ಈ ಸಂದರ್ಭದಲ್ಲಿಯೂ ಓಡಿಸಬೇಕು ಎಂದು ಪತಂಜಲಿ ಸಮಿತಿ ಜಿಲ್ಲಾಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ ಮನವಿ ಮಾಡಿದರು.
ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ, ಆರ್‌ಎಸ್‌ಎಸ್ ಮುಖಂಡ ಟಿ. ಶಂಭು ಶೆಟ್ಟಿ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಟ್ಟು ಲಕ್ಷ್ಮೀನಾರಾಯಣ ಮಾತನಾಡಿದರು. ಪತಂಜಲಿ ಸಮಿತಿ ರಾಜ್ಯ ಸಹಪ್ರಭಾರಿ ಡಾ.ಜ್ಞಾನೇಶ್ವರ ನಾಯಕ್, ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ಸುಜಾತಾ ಮಾರ್ಲ, ಜಿಲ್ಲಾಧ್ಯಕ್ಷೆ ಲೀಲಾ ಅಮೀನ್ ಉಪಸ್ಥಿತರಿದ್ದರು.
ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್ ಕಾರ್ಯಕ್ರಮ ನಿರೂಪಿಸಿದರು.