ನವದೆಹಲಿ: ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನದ ಲಾಡು ತಯಾರಿಸುವುದಕ್ಕೆ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ನಕಲಿ ತುಪ್ಪ ಸರ ಬರಾಜು ಮಾಡಿದ ಉತ್ತರಾಖಂಡದ ಡೇರಿಯೊಂದರ ಬಂಡವಾಳವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಟಾಬಯಲು ಮಾಡಿದೆ.
ಭೋಲೇಬಾಬಾ ಅರ್ಗಾನಿಕ್ ಡೇರಿ ಎಂಬ ಕಂಪನಿ 2019ರಿಂದ 2024ರ ನಡುವೆ, ಒಂದೇ ಒಂದು ಹನಿ ಹಾಲು ಅಥವಾ ಬೆಣ್ಣೆ ಪಡೆಯದಿದ್ದರೂ 68 ಲಕ್ಷ ಕೆ.ಜಿ. ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್(ಟಿಟಿಡಿ)ಗೆ ಸರಬರಾಜು ಮಾಡಿರುವುದನ್ನು ಲಾಡು ತುಪ್ಪ ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ (ಎಸ್ಐಟಿ) ಬಹಿರಂಗಪಡಿಸಿದೆ.
ಅಜಯ್ ಕುಮಾರ್ ಸುಗಂಧ ಎಂಬಾತನ ಬಂಧನದೊಂದಿಗೆ ಈ ನಕಲಿ ತುಪ್ಪದ ಆಘಾತಕಾರಿ ಜಾಲ ಹೊರಬಿದ್ದಿದೆ. ಲಾಡು ಪ್ರಸಾದ ತಯಾರಿಗೆ ಅಗತ್ಯವಾದ ತುಪ್ಪ ಪೂರೈಸುವ ಗುತ್ತಿಗೆ ಪಡೆದಿದ್ದ ಭೋಲೇಬಾಬಾ ಅರ್ಗಾನಿಕ್ ಡೇರಿಗೆ ಮೊನೋಡೈಗ್ಲಿಸರೈಡ್ಸ್, ಅಸಿಟಿಕ್ ಆಸಿಡ್ ಈಸ್ಟರ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಸುಗಂಧ ಸರಬರಾಜು ಮಾಡುತ್ತಿದ್ದ. ಆಂಧ್ರಪ್ರದೇಶದ ನೆಲ್ಲೂರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮಾಂಡ್ ವರದಿಯಲ್ಲಿ ಎಸ್ಐಟಿ ಈ ಮಾಹಿತಿಗಳನ್ನು ಒದಗಿಸಿದೆ. ಆತ ಈ ಹಗರಣದ 16ನೇ ಆರೋಪಿ (ಎ6) ಆಗಿದ್ದಾನೆ.
ಕಪ್ಪ ಪಟ್ಟಿಗೆ: ಭೋಲೇಬಾಬಾ ಡೇರಿಯನ್ನು 2022ರಲ್ಲಿ ಅನರ್ಹಗೊಳಿಸಿ ಕಪ್ಪ ಪಟ್ಟಿಗೆ ಸೇರಿಸಿದ್ದರೂ ಅದು ಯಶಸ್ವಿಯಾಗಿ ಇತರ ಡೇರಿಗಳಿಂದ ಗುತ್ತಿಗೆಯ ಬಿಡ್ಡಿಂಗ್ ಮಾಡಿ ಟಿಟಿಡಿಗೆ ಕಲಬೆರಕೆ ತುಪ್ಪ ಸರಬರಾಜು ಮುಂದುವರಿಸಿತ್ತು. ಅಂಥ ಡೇರಿಗಳಲ್ಲಿ ತಿರುಪತಿಯ ವೈಷ್ಣವಿ ಡೇರಿ, ಉತ್ತರ ಪ್ರದೇಶದ ಮಾಲ್ ಗಂಗಾ ಮತ್ತು ತಮಿಳುನಾಡಿ ಎಆರ್ ಡೇರಿ ಫುಡ್ಸ್ ಸೇರಿವೆ.
ತಾಳೆ ಎಣ್ಣೆ ಮಿಶ್ರಣ: ಭೋಲೇಬಾಬಾ ಡೇರಿ, ರೂರ್ಕಿಯಲ್ಲಿರುವ ತನ್ನ ಸ್ಥಾವರದಲ್ಲಿ ತಾಳೆ ಎಣ್ಣೆ ಮತ್ತು ರಾಸಾಯನಿಕಗಳನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸುತ್ತಿತ್ತು ಎಂದು ಎಸ್ಐಟಿ ವರದಿ ನಮೂದಿಸಿದೆ. ವೈಷ್ಣವಿ, ಮಾಲ್ ಗಂಗಾ ಮತ್ತು ಎಆರ್ ಡೇರಿ ಮೂಲಕ ಅವುಗಳನ್ನು ಟಿಟಿಡಿಗೆ ತಲುಪಿಸಲಾಗುತ್ತಿತ್ತು. ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿರುವ ಹಾಗೂ ನಿರ್ಲಕ್ಷ್ಯ ತೋರಿರುವ ಅನುಮಾನಕ್ಕೆ ಇದು ಕಾರಣವಾಗಿದೆ.
ಚಂದ್ರಬಾಬು ನಾಯ್ಡು ಆರೋಪ: ಜಗನ್ ಮೋಹನ್ ರೆಡ್ಡಿಯ ವೈಎಸ್ಸಿಆರ್ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಾಣಿ ಕೊಬ್ಬಿನಿಂದ ಕೂಡಿದ ತುಪ್ಪದಿಂದ ಲಡ್ಡುಗಳನ್ನು ತಯಾರಿಸಲಾಗುತ್ತಿತ್ತು ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬಹಿರಂಗವಾಗಿಯೇ ಹೇಳಿದ್ದರು.
ಸಂಸದರ ಆಪ್ತ ಸಹಾಯಕ ಭಾಗಿ ಪ್ರಾಣಿಗಳ ಕೊಬ್ಬು ಬೆರೆಸಿದ ‘ಅಶುದ್ಧ’ ತುಪ್ಪದಿಂದ ವಿಶ್ವವಿಖ್ಯಾತ ತಿರುಪತಿ ಶ್ರೀವಾರಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ ಎಂಬ ಆರೋಪ ಕಳೆದ ವರ್ಷ ಕೇಳಿ ಬಂದಾಗ ಭಾರಿ ರಾಜಕೀಯ ಮಾತ್ರವಲ್ಲದೆ ಕಾನೂನು ಹಾಗೂ ಸಾಮಾಜಿಕ-ಸಾಂಸ್ಕೃತಿಕ ವಿವಾದ ಭುಗಿಲೆದ್ದಿತ್ತು.
ಉತ್ತರ ಪ್ರದೇಶದ ಪ್ರೀಮಿಯರ್ ಅಗ್ರಿ ಫುಡ್ಸ್ ಕಂಪನಿಗೆ ಸಂಪರ್ಕವಿರುವ ಹವಾಲಾ ಏಜೆಂಟರಿಂದ ಆಂಧ್ರಪ್ರದೇಶದ ಲೋಕಸಭಾ ಸದಸ್ಯ ವೈ.ವಿ.ಸುಬ್ಬಾರೆಡ್ಡಿಯ ಆಪ್ತ ಸಹಾಯಕ ಕೆ.ಚಿನ್ನಪ್ಪಣ್ಣ 50 ಲಕ್ಷ ರೂ. ಅಕ್ರಮದ ಹಣ ಪಡೆದಿದ್ದ ಎಂದು ಮೂಲಗಳು ತಿಳಿಸಿವೆ. ಅಮನ್ ಗುಪ್ತಾ ಎಂಬ ದೆಹಲಿಯ ದಲ್ಲಾಳಿಯಿಂದ 20 ಲಕ್ಷ ರೂ. ಹಾಗೂ ಉಳಿದ ಹಣವನ್ನು ಅಗ್ರಿ ಫುಡ್ಸ್ನ ಹಿರಿಯ ಅಧಿಕಾರಿ ವಿಜಯ್ ಗುಪ್ತಾನಿಂದ ಚಿನ್ನಪ್ಪಣ್ಣ ಪಡೆದಿದ್ದ.


















