ಉಡುಪಿ:ಆಧುನಿಕ 21ನೇ ಶತಮಾನದ ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯ ಪ್ರಸ್ತುತತೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ – ಉದ್ಘಾಟನಾ ವರದಿ

ಉಡುಪಿ:ಆಧುನಿಕ 21ನೇ ಶತಮಾನದ ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯ ಪ್ರಸ್ತುತತೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವು ನವೆಂಬರ್ 7, 2025 ರಂದು ಉಡುಪಿ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಮ್ಯಾನೇಜೆಂಟ್ (PIM), ಉಡುಪಿ ಇಲ್ಲಿ ಆಯೋಜಿಸಲಾಯಿತು.

ಈ ಸಮ್ಮೇಳನವನ್ನು ನೇಪಾಳದ ಮಾಧೇಶ್ ವಿಶ್ವವಿದ್ಯಾಲಯ, ಮತ್ತು ಉಡುಪಿ ಮ್ಯಾನೇಜೆಂಟ್ ಅಸೋಸಿಯೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು.

ಸಮ್ಮೇಳನವನ್ನು ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕರಾದ ಶ್ರೀ ರಮೇಶ್ ವೈದ್ಯ ಅವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಅರ್ಥಶಾಸ್ತ್ರ, ಆರ್ಯಭಟೀಯ, ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಮುಂತಾದ ಪ್ರಾಚೀನ ಭಾರತೀಯ ಶಾಸ್ತ್ರಗಳ ಶಾಶ್ವತ ಪ್ರಸ್ತುತತೆಯನ್ನು ಪ್ರಸ್ತಾಪಿಸಿದರು ಹಾಗೂ ಈ ಗ್ರಂಥಗಳು ಶತಮಾನಗಳ ಬಳಿಕವೂ ಆಧುನಿಕ ಯುಗದಲ್ಲಿ ಇರುವ ಮಹತ್ವದ ಬಗ್ಗೆ ಬೆಳಕುಹಾಕಿದರು. ಭಾರತೀಯ ಜ್ಞಾನ ಪರಂಪರೆಯ ಜೊತೆಗೆ ಆಧುನಿಕ ತಂತ್ರಜ್ಞಾನಗಳ ಸಂಯೋಜನೆಯು ಆರ್ಥಿಕ ಬೆಳವಣಿಗೆಯ ಜೊತೆಗೆ ಸಮಾಜದ ಸೌಹಾರ್ದತೆಯನ್ನೂ ಬಲಪಡಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ಶ್ರೀ ಸಿಎ ಟಿ. ಪ್ರಶಾಂತ್ ಹೊಳ್ಳ, ಗೌರವ ಖಜಾಂಚಿ, PIM ಅವರು ಸಮಾರಂಭದಲ್ಲಿ ಮಾತನಾಡಿ, ಬೌದ್ಧಿಕ ಆಳವಿರುವ ಮತ್ತು ಅಂತರವಿಷಯಕ ಮಹತ್ವದ ಈ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ ಸಮಿತಿಯನ್ನು ಅಭಿನಂದಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ, ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ಡಾ. ಎ. ಪಿ. ಭಟ್ ಅವರು ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಧೂಮಕೇತುಗಳಂತಹ ಆಕಾಶ ಕಾಯಗಳನ್ನು ಉಲ್ಲೇಖಿಸಿದರು. ಅವರು ಇಂದಿನಂತೆ ಯಾವುದೇ ಆಧುನಿಕ ಸಾಧನಗಳಿಲ್ಲದೆ ಬ್ರಹ್ಮಾಂಡದ ವಸ್ತುಗಳನ್ನು ಗಮನಿಸಿದ ಪ್ರಾಚೀನ ಋಷಿಗಳ ಅದ್ಭುತ ವೀಕ್ಷಣಾ ಸಾಮರ್ಥ್ಯವನ್ನು ಪ್ರಶಂಸಿಸಿ, ಇಂತಹ ಪ್ರಾಚೀನ ಜ್ಞಾನವನ್ನು ಆಧುನಿಕ ವಿಷಯಗಳೊಂದಿಗೆ ಸಂಪರ್ಕಿಸಲು ವೇದಿಕೆಯಾದ ಸಮ್ಮೇಳನದ ಆಯೋಜಕರನ್ನು ಅಭಿನಂದಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ- ಈ ಸಮ್ಮೇಳನದಲ್ಲಿ ಮಂಡಿಸಲ್ಪಡಯುವ ಸಂಶೋಧನಾ ಪಬಂಧಗಳ ಸಾರ ಇರುವ Book of Abstracts, ಮೇ 2025ರಲ್ಲಿ ನಡೆದ ಇಂಡೋ-ಕೆನ್ಯಾ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡನೆಯಾದ ಸಂಶೋಧನಾ ಪ್ರಬಂಧಗಳ ಸಂಪುಟ, (Proceedings) ಮತ್ತು ಡಾ. ಪಿ. ಎಸ್. ಐತಾಳ್ ಹಾಗೂ ಡಾ. ಎಸ್. ರಾಮನಾಥನ್ ಅವರ “The Journey Within – Karmayoga to Dhyana Yoga” ಎಂಬ ಪುಸ್ತಕಗಳ ಬಿಡುಗಡೆ ನೆರವೇರಿತು.

ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಂಟ್ ನ ನಿರ್ದೇಶಕರಾದ ಡಾ. ಪಿ. ಎಸ್. ಐತಾಳ್ ಅವರು ಸ್ವಾಗತ ಭಾಷಣ ಮಾಡಿದರು.

ಸಮ್ಮೇಳನದ ಸಂಯೋಜಕರಾದ ಪ್ರೊ. ವೇಣುಗೋಪಾಲ ರಾವ್, ಸಮ್ಮೇಳನದ ಔಚಿತ್ಯ ಮತ್ತು ಹಿನ್ನೆಲೆಯನ್ನು ಸಭೆಯ ಮುಂದಿಟ್ಟರು. ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ಡಾ. ಭರತ್ ವಿ, ಸಂಯೋಜಕರು, ಅವರ ಹೃತ್ತೂರ್ವಕ ಧನ್ಯವಾದ ಪ್ರಸ್ತಾವನೆಯೊಂದಿಗೆ ಮುಕ್ತಾಯಗೊಂಡಿತು.

ಡಾ. ಎಸ್. ರಾಮನಾಥನ್, ಫೆಲೋ, IIAR ಶಿಮ್ಲಾ; ಡಾ. ಕೆ. ವಿ. ಎಂ. ವಾರಂಬಳ್ಳಿ, ಮಾಜಿ ನಿರ್ದೇಶಕ, ಮಣಿಪಾಲ ಮ್ಯಾನೇಜೆಂಟ್ ಇನ್ಸಿಟ್ಯೂಟ್; ಹಾಗೂ ಡಾ. ಗೋಪಾಲ ಆಚಾರ್ಯ, ನಿರ್ದೇಶಕರು, ವಾದಿರಾಜ ಸಂಶೋಧನಾ ಪ್ರತಿಷ್ಠಾನ ಅವರು ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ದ್ವಿತೀಯ ವರ್ಷದ ಎಂ.ಬಿ.ಎ. ವಿದ್ಯಾರ್ಥಿಗಳಾದ ಶಾರದಾ ಮತ್ತು ತಂಡದ ಪ್ರಾರ್ಥನೆಯಿಂದ ಆರಂಭಗೊಂಡಿತು. ಸಮ್ಮೇಳನದ ಸಂಯೋಜಕಿಯಾದ ಡಾ. ಭಾರತಿ ಕಾರಂತ್, ಇವರು ಕಾರ್ಯಕ್ರಮವನ್ನು ನಿರೂಪಿಸಿದರು

ಉದ್ಘಾಟನಾ ಅಧಿವೇಶನದ ನಂತರ, ಸಮ್ಮೇಳನವು ವಿಷಯಾಧಾರಿತವಾಗಿ ಆರು ಪೂರ್ಣ ಅಧಿವೇಶನಗಳು (Plenary Sessions) ಹಾಗೂ ಹದಿಮೂರು ಆಹ್ವಾನಿತ ಉಪನ್ಯಾಸಗಳೊಂದಿಗೆ ಮುಂದುವರಿಯಿತು. ಈ ಅಧಿವೇಶನಗಳಲ್ಲಿ ದೇಶದ ಮತ್ತು ವಿದೇಶದ ಪ್ರಮುಖ ಪಂಡಿತರು ಹಾಗೂ ತಜ್ಞರು ಭಾಗವಹಿಸಿದರು.