ಉಡುಪಿ: ಹೆದ್ದಾರಿಯಲ್ಲಿ ಉರುಳಿ ಬಿದ್ದ ಲಾರಿ- ಅಡಿಯಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪದಿಂದ ಕಿನ್ನಿಮೂಲ್ಕಿಗೆ ಹೋಗುವ ರಸ್ತೆಯಲ್ಲಿ ನಡುರಾತ್ರಿ ಅಪಘಾತ ಸಂಭವಿಸಿದೆ.

ಇಲ್ಲಿ ಫೈ ಓವರ್ ಕಾಮಗಾರಿ ನಡೆಯುತ್ತಿದ್ದು, ಸರ್ವಿಸ್ ರೋಡ್ ಮೂಲಕವೇ ಬೃಹತ್ ಗಾತ್ರದ ಲಾರಿಗಳು ಓಡಾಟ ನಡೆಸುತ್ತವೆ. ಕಟ್ಟಿಗೆ ತುಂಬಿದ ಲಾರಿಯೊಂದು ಸರ್ವಿಸ್ ರೋಡ್ ನಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ವಾಗುವ ಪಾಯಿಂಟ್ ನಲ್ಲಿ ರಸ್ತೆ ಅವ್ಯವಸ್ಥೆಯಿಂದ ಉರುಳಿ ಬಿದ್ದಿದೆ. ಸರ್ವಿಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕವಾಗುವ ಪಾಯಿಂಟ್ ನಲ್ಲಿ ಗುಂಡಿ ಬಿದ್ದಿದ್ದು ರಸ್ತೆ ನಿರ್ವಹಣೆ ಸರಿಯಾಗಿಲ್ಲ, ಇದರಿಂದ ಇಲ್ಲಿ ಪದೇಪದೇ ಅಪಘಾತ ಸಂಭವಿಸುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಕಟ್ಟಿಗೆ ತುಂಬಿದ ಲಾರಿ ಉರುಳಿ ಬಿದ್ದ ಪರಿಣಾಮ ರಾತ್ರಿ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ಲಾರಿ ಅಡಿ ಸಿಲುಕಿದ್ದ ಇಬ್ಬರನ್ನು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಮೇಲ್ ಸೇತುವೆ ಕಾಮಗಾರಿ ನಡೆಯುವವರೆಗೆ ಈ ಸಂಪರ್ಕ ರಸ್ತೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.