ಉಡುಪಿ: ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಚಿತ್ರನಟ ಹರೀಶ್ ರಾಯ್ ಅವರ ಅಂತ್ಯ ಸಂಸ್ಕಾರ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಉಡುಪಿಯಲ್ಲಿ ನೆರವೇರಿತು. ಉಡುಪಿಯ ಅಂಬಲಪಾಡಿಯ ಮೂಲ ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ತುಳಸಿ ಕಟ್ಟೆ ಮುಂಭಾಗದಲ್ಲಿ ಅರ್ಚಕರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನ ನಡೆಯಿತು. ಹರೀಶ್ ಆಚಾರ್ಯ ಆಪ್ತರು ಕುಟುಂಬದವರು ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾದರು. ಬಳಿಕ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಪಾರ್ಥಿವ ಶರೀರವನ್ನು ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಹಿಂದು ರುದ್ರಭೂಮಿಗೆ ಕೊಂಡೊಯ್ಯಲಾಯಿತು. ನಟ ಹರೀಶ್ ರಾಯ್ ಮೃತದೇಹಕ್ಕೆ ಸಹೋದರ ಸತೀಶ್ ಹಾಗೂ ಪುತ್ರರಾದ ರೋನೆತ್ ರಾಯ್, ರೋಷನ್ ರಾಯ್ ಅಗ್ನಿಸ್ಪರ್ಶ ಮಾಡಿದರು.
ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಹರೀಶ್ ರಾಯ್ ಪಂಚಭೂತಗಳಲ್ಲಿ ಲೀನವಾದರು. ಸಹೋದರ ಸಹೋದರಿಯರು ಅಂತಿಮ ನಮನ ಸಲ್ಲಿಸಿದರು.


















