ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಮಾರಾಟ ಇದೀಗ ಅಧಿಕೃತಗೊಂಡಿದೆ. ಆರ್‌ಸಿಬಿಯ ಮಾತೃಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಬಾಂಬೆ ಷೇರುಪೇಟೆಗೆ ಈ ಮಾರಾಟದ ಮಾಹಿತಿಯನ್ನು ನೀಡಿದೆ. 2026ರ ಮಾ.31ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣ ಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ.
“ಯುನೈಟೆಡ್ ಸ್ಪಿರಿಟ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಆರ್ ಸಿಎಸ್‌ಪಿಎಲ್ ಸಂಸ್ಥೆಯನ್ನು ಮಾರಾಟ ಮಾಡಲು ಮುಂದಾಗಿದ್ದೇವೆ. ಇದು ಆರ್‌ಸಿಬಿ ಪುರುಷ ಹಾಗೂ ಮಹಿಳಾ ತಂಡಗಳ ಮೇಲಿನ ನಿಯಂತ್ರಣವನ್ನು ವರ್ಗಾಯಿಸುತ್ತದೆ’ ಷೇರುಪೇಟೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖೀಸಲಾಗಿದೆ.17000 ಕೋಟಿ ರೂ.ಗೆ ಬೇಡಿಕೆ: ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಯುಎಸ್‌ಎಲ್ 17000 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ. ಆರ್‌ಸಿಬಿಯನ್ನು ನಿರ್ವಹಣೆ ಮಾಡುವುದು ಮಾತೃಸಂಸ್ಥೆಯ ಮೂಲ ವ್ಯಾಪಾರಕ್ಕೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲದ ಕಾರಣ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದೆ.
ಪೂನಾವಾಲರಿಂದ ಖರೀದಿ?: ಸೀರಂ ಔಷಧ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲ ಅವರು ಖರೀದಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೇ ಅದಾನಿ ಗ್ರೂಪ್, ಜೆಎಸ್‌ಡಬ್ಲ್ಯೂ ಗ್ರೂಪ್ ಸೇರಿದಂತೆ ಹಲವು ಕಂಪನಿಗಳು ಖರೀದಿಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ,


















