ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 50ನೇ ಜನ್ಮದಿನದ ಪ್ರಯುಕ್ತ ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಆರ್ಥಿಕ ಸಂಕಷ್ಟದಲ್ಲಿರುವ ಬಡ ರೈತ ಕುಟುಂಬವೊಂದಕ್ಕೆ ಉಡುಪಿ ಶ್ರೀಕೃಷ್ಣ ಮಠದ ಗೀತಾಮಂದಿರದ ಮುಂಭಾಗ ಗೋ ದಾನ ಮಾಡಲಾಯಿತು.
ಕೆಲಸ ಮಾಡುತ್ತಿದ್ದ ವೇಳೆ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ನಿವಾಸಿ ಗಣಪ ನಾಯ್ಕ್ ಅವರ ಪತ್ನಿ ಗಿರಿಜಾ ಬಾಯಿ ಅವರಿಗೆ ದನ ಮತ್ತು ಕರುವನ್ನು ಗೋದಾನ ಮಾಡಲಾಯಿತು. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೋವಿಗೆ ಗೋಗ್ರಾಸ ನೀಡಿ ಗಿರಿಜಾ ಬಾಯಿ ಅವರಿಗೆ ಹಸ್ತಾಂತರಿಸಿದರು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಗೋವು ಸಂತತಿ ಜಾಸ್ತಿಯಾದರೆ ದೇಶಕ್ಕೆ ಒಳಿತು. ಈ ಮೂಲಕ ಜನರ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಮಠದ ದಿವಾನ ನಾಗರಾಜ್ ಆಚಾರ್ಯ, ಮುಖಂಡರಾದ ಸಂಧ್ಯಾ ರಮೇಶ್, ದಿನಕರ ಶೆಟ್ಟಿ ಹೆರ್ಗ, ಗಿರೀಶ್ ಅಂಚನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ, ದಿನೇಶ್ ಅಮೀನ್, ವಿಜಯ ಕೊಡವೂರು, ಶ್ರೀಕಾಂತ್ ನಾಯಕ್, ವೀಣಾ ಎಸ್. ಶೆಟ್ಟಿ, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.


















