ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ.ಆರ್.ಜಿ. ಗ್ರೂಪ್ ಪ್ರಾಯೋಜಕತ್ವದಲ್ಲಿ 4ನೇ ಬಾರಿ “ಬೃಹತ್ ಉದ್ಯೋಗ ಮೇಳ”ವನ್ನು ನವೆಂಬರ್ 6ರಂದು ಉಡುಪಿಯ ಕುಂತಳನಗರದ ಪ್ರಕಾಶ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿವೆ ಎಂದರು.
ನ.6ರಂದು ಬೆಳಿಗ್ಗೆ 9.30ಕ್ಕೆ ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷರಾದ ಡಾ. ಕೆ.ಪ್ರಕಾಶ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿಕೆ, ಜಿಲ್ಲೆಯ ಶಾಸಕರು, ಮಾಜಿ ಸಚಿವರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿದ್ದು, ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಪ್ರಮುಖ ಕಂಪನಿಗಳಾದ ಸುಜ್ಞಾನ್ ಸಂಸ್ಥೆಯಲ್ಲಿ 650 ರಿಂದ 700ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಕರ್ನಾಟಕ ಸೇರಿ ದೇಶದ ವಿವಿಧ ಲೊಕೇಶನ್‌ಗಳಲ್ಲಿ ಲಭ್ಯವಿದ್ದು, ನವೆಂಬರ್ 6 ಮತ್ತು 7ರಂದು ಅಭ್ಯರ್ಥಿಗಳ ಸಂದರ್ಶನ ನಡೆಯಲಿವೆ. ಈ ಸಂಸ್ಥೆಗೆ ಸುಮಾರು 250 ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಮಹಿಳಾ ಡಿಪ್ಲೋಮಾ ಹಾಗೂ ಇಂಜಿನಿಯರ್‌ಗಳು ಅಗತ್ಯವಿದೆ ಎಂದು ಹೇಳಿದರು.
ಜಾಬ್ ಫೇರ್ ಡ್ರೈವ್‌ನ ಛೇರ್ಮನ್ ಡಾ. ದಿವ್ಯರಾಣಿ ಪ್ರದೀಪ್ ಮಾತನಾಡಿ, ಇಂಜಿನಿಯರಿಂಗ್, ಡಿಪ್ಲೋಮಾ, ಐಟಿ, ಎಐ, ಎಂಬಿಎ, ಎಂಕಾಂ, ಎಂಸಿಎ, ಬಿಸಿಎ, ಬಿಕಾಂ, ಬಿ.ಎ., ಬಿ.ಎಸ್.ಸಿ., ಹೋಟೆಲ್ ಮ್ಯಾನೇಜ್ಮೆಂಟ್, ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್, ಪಿ ಯು ಸಿ ಸೇರಿದಂತೆ ಎಲ್ಲಾ ವಿದ್ಯಾ ಕ್ಷೇತ್ರದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಕಳೆದ ಮೂರು ವರ್ಷಗಳಲ್ಲಿ 2,200 ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಎಚ್.ಬಿ. ಶೆಟ್ಟಿ, ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ, ದಯಾನಂದ ಹೆಗ್ಡೆ ಉಪಸ್ಥಿತರಿದ್ದರು.


















