ಜೈಪುರ: ರಾಜಸ್ಥಾನದ ಫಲೋಡಿ ಜಿಲ್ಲೆಯ ಭಾರತ ಮಾಲಾ ಹೆದ್ದಾರಿಯಲ್ಲಿ ಭಾನುವಾರ(ನ. 02) ಸಂಜೆ ನಿಂತಿದ್ದ ಟ್ರಕ್ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು (Horrific accident), ಘಟನೆಯಲ್ಲಿ 15 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತಪಟ್ಟವರು ಜೋಧ್ಪುರದ ಸುರ್ಸಾಗರ್ ಪ್ರದೇಶದ ನಿವಾಸಿಗಳು. ಕಪಿಲ್ ಮುನಿ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಬಿಕಾನೇರ್ನ ಕೊಲಾಯತ್ ದೇವಸ್ಥಾನ ದರ್ಶನ ಮಾಡಿಕೊಂಡು ವಾಪಾಸ್ ಆಗುವಾಗುವಾಗ ಭಾರತ ಮಾಲಾ ಹೆದ್ದಾರಿಯಲ್ಲಿರುವ ಮಾಡೋಡಾ ಗ್ರಾಮದ ಬಳಿ ಘಟನೆ ನಡೆದಿದೆ. 10 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಟ್ರಾವೆಲರ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅನೇಕ ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ತಕ್ಷಣಾ ಪೊಲೀಸರು ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಹೊರತಗೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಮಾತನಾಡಿರುವ ಜೋಧ್ಪುರ ಕಮಿಷನರ್ ಓಂ ಪ್ರಕಾಶ್, ಹದಿನೈದು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೊದಲು ಓಸಿಯನ್ನಲ್ಲಿರುವ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಬಳಿಕ ಜೋಧ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತಂತೆ ತೀವ್ರ ದುಃಖ ವ್ಯಕ್ತಪಡಿಸಿರುವ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ, ಫಲೋಡಿಯ ಮಾತೋಡಾ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ದುರಂತ ಮತ್ತು ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಎಲ್ಲಾ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.


















