ಉಡುಪಿ: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ಭುವನೇಶ್ವರಿ ದೇವಿಯ ಮೆರವಣಿಗೆಗೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಉಡುಪಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸುಮಾರು ಎರಡು ಕಿ.ಮೀ. ದೂರ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ವಿವಿಧ ಇಲಾಖೆಗಳ ಸಾಧನೆಯನ್ನು ವಿವರಿಸುವ ಸ್ಥಬ್ದಚಿತ್ರಗಳು ಭಾಗವಹಿಸಿದ್ದವು.
ಬಹುಮಾನ: ಕನ್ನಡ ರಾಜ್ಯೋತ್ಸವ ದಿನಾಚರಣೆ
ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ಸ್ಥಬ್ದಚಿತ್ರಗಳಲ್ಲಿ ಕೆ.ಆರ್.ಐ.ಡಿ.ಎಲ್ ಪ್ರಥಮ ಸ್ಥಾನ, ನಿರ್ಮಿತಿ ಕೇಂದ್ರ ದ್ವಿತೀಯ ಸ್ಥಾನ ಹಾಗೂ ನಗರಸಭೆ ತೃತೀಯ ಸ್ಥಾನ ಪಡೆದಿದೆ.
ಅಜ್ಜರಕಾಡು ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಅಂಬಲಪಾಡಿ ಕಿದಿಯೂರು ವಿದ್ಯಾ ಸಮುದ್ರ ಆಂಗ್ಲಮಾಧ್ಯಮ ಶಾಲೆ ಪ್ರಥಮ, ಮಲ್ಪೆ ನಾರಾಯಣ ಗುರು ಪ್ರೌಢಶಾಲೆ ದ್ವಿತೀಯ ಹಾಗೂ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆ ತೃತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡವು.
ಪಥ ಸಂಚಲನದ ಪ್ರೌಢಶಾಲಾ ವಿಭಾಗದಲ್ಲಿ ಉಡುಪಿಯ ಒಳಕಾಡು ಸರಕಾರಿ ಪ್ರೌಢಶಾಲೆ ಪ್ರಥಮ, ಮಣಿಪಾಲದ ಮಾಧವ ಕೃಪಾ ಪ್ರೌಢಶಾಲೆ ದ್ವಿತೀಯ ಹಾಗೂ ಉಡುಪಿಯ ಸೈಂಟ್ ಸಿಸಿಲಿ ಪ್ರೌಢಶಾಲೆ (ಬಾಲಕರು) ತೃತೀಯ ಸ್ಥಾನ ಪಡೆದರೆ, ಕಾಲೇಜು ವಿಭಾಗದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜು ಎನ್.ಸಿ.ಸಿ ಆರ್ಮಿ ಪ್ರಥಮ, ಪೂರ್ಣಪ್ರಜ್ಞ ಕಾಲೇಜು ಎನ್.ಸಿ.ಸಿ ನೇವಿ ದ್ವಿತೀಯ ಹಾಗೂ ಕುಂಜಿಬೆಟ್ಟು ಮಹಾತ್ಮಾಗಾಂಧಿ ಕಾಲೇಜು ತೃತೀಯ ಸ್ಥಾನ ಪಡೆದವು.


























