ಉಡುಪಿ:ಪ್ರಗತಿ ಪರ ಕೃಷಿಕ,ಸಾಮಾಜಿಕ ಚಿಂತಕ,ಕೋಟ ಮೂರ್ತೆದಾರ ಸೆ .ಸ ಸಂಘದ ಅಧ್ಯಕ್ಷರಾದ ಕೆ. ಕೊರಗ ಪೂಜಾರಿಯವರು ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಕೆ. ಕೊರಗ ಪೂಜಾರಿಯವರ ತಂದೆ ದಿ. ಕಾಳಪ್ಪ ಪೂಜಾರಿ ತಾಯಿ ದಿ. ಚಂದು ಪೂಜಾರ್ತಿಯವರ ಮಗನಾಗಿ 01-01-1946 ರಂದು ಜನಿಸಿದರು.ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮುಗಿಸಿದ್ದು,ಕೃಷಿ, ಮೂರ್ತೆದಾರಿಕೆ, ಮೀನುಗಾರಿಕೆಯ ವೃತ್ತಿ ಮಾಡುತ್ತಿದ್ದರು.ಹವ್ಯಾಸವಾಗಿ ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕ ಸೇವೆ ಸಲ್ಲಿಸಿದ್ದಾರೆ.
ಕೆ. ಕೊರಗ ಪೂಜಾರಿಯವರು ಸುಮಾರು 58 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಹಲವಾರು ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ಶ್ರಮಿಸಿದ ಉಡುಪಿ ಜಿಲ್ಲೆಯ ಓರ್ವ ಪ್ರಾಮಾಣಿಕ, ದಕ್ಷ ಸಹಕಾರಿ ಮುಖಂಡರಾಗಿದ್ದು, ಇಂದಿಗೂ ಸಹ ಇವರ ಅವಿರತ ಶ್ರಮದಿಂದ ಹಲವಾರು ಹಿಂದುಳಿದ ವರ್ಗಗಳ ಸದಸ್ಯರ ಸಹಕಾರಿ ಸಂಘಗಳು ಅತ್ಯುತ್ತಮ ಸಹಕಾರ ಸಂಘಗಳಾಗಿ ಬೆಳೆಯಲು ಸಹಕಾರಿಯಾಗಿದೆ. ಅವರು ಸಹಕಾರಿ ಸಂಘಕ್ಕೆ ನೀಡಿದ ಸೇವೆಯ ವಿವರ ಈ ಕೆಳಗಿನಂತಿದೆ.
🔹ದಿನಾಂಕ 28.10.1967 ರಲ್ಲಿ ಕೋಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯ ನಂಬ್ರ 211ರ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದರು.
🔹 1978ರಿಂದ 1987ರ ವರೆಗೆ ಸತತ 9 ವರ್ಷ ಕೋಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮುಚ್ಚುವ ಹಂತದಲ್ಲಿದ್ದ ಸಂಘವನ್ನು ಪುನಶ್ವೇತನಗೊಳಿಸಿದರು.
🔹 1990ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಶೇಂದಿ ನಿಷೇದ ಮಾಡಿದಾಗ ಮೂರ್ತೆದಾರರ ಚಳುವಳಿಯನ್ನು ಸಂಘಟಿಸಿ ಶೇಂದಿ ನಿಷೇಧವನ್ನು ತೆರವುಗೊಳಿಸಲು ಹೋರಾಟ ನಡೆಸಿ 1991-92ರಲ್ಲಿ ಮೂರ್ತೆದಾರರ ಸಹಕಾರಿ ಸಂಘದ ಮುಖ್ಯ ಪ್ರವರ್ತಕರಾಗಿ, ಸ್ಥಾಪಕ ಅಧ್ಯಕ್ಷರಾಗಿ ಹಾಗೂ 20 ವರ್ಷ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘವನ್ನು ಇಂದು ಸುಮಾರು 360 ಕೋಟಿ ವ್ಯವಹಾರ ನಡೆಸಲು ಕಾರಣಕರ್ತರಾದರು ಹಾಗೂ ಇತರ ಮೂರ್ತೆದಾರರ ಸಹಕಾರಿ ಸಂಘದ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಿದರು.
🔹 1993ರಿಂದ 1998ರ ವರೆಗೆ 5 ವರ್ಷ ಹಾಲು ಉತ್ಪಾದಕರ ಸಹಕಾರಿ ಸಂಘ ಕೋಡಿಯ ನಿರ್ದೇಶಕರಾಗಿಯೂ ಸೇವೆ ನೀಡಿದರು.
🔹 ದಿನಾಂಕ 10.07.1999ರಂದು ಸ್ಥಾಪನೆಗೊಂಡ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನಾಗಿ ಸ್ಥಾಪಕ ನಿರ್ದೇಶಕರಾಗಿ ಹಾಗೂ 25 ವರ್ಷ ನಿರ್ದೇಶಕರಾಗಿ ಅನನ್ಯ ಸೇವೆ ನೀಡಿದರು.
🔹 1996ರಿಂದ 2006ರ ವರೆಗೆ ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
🔹 2006-2007ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಪ್ರತ್ಯೇಕ ಮೂರ್ತೆದಾರರ ಮಹಾಮಂಡಲವನ್ನು ರಚಿಸಿ ಸ್ಥಾಪಕ ಉಪಾಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ 2018ರಿಂದ 2023ರ ಸಾಲಿನವರೆಗೆ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಗತಿ ಪರ ಕೃಷಿಕರು, ಸಾಮಾಜಿಕ ಚಿಂತಕರು ಹಾಗೂ ಮೂರ್ತೆದಾರ ಸೇವಾ ಸಹಕಾರಿ ಸಂಘ ನಿ., ಕೋಟ. ಇದರ ಅಧ್ಯಕ್ಷರಾಗಿ ಕೆ. ಕೊರಗ ಪೂಜಾರಿಯರು ಸಹಕಾರಿ ಕ್ಷೇತ್ರದಲ್ಲಿ 58 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇವರ ಈ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆ ಮಾಡಲಾಯಿತು.


















