ಚೆನ್ನೈ: ಬೈಕ್ ಟ್ಯಾಕ್ಸಿ ಚಾಲಕನಾಗಿ (Taxi Driver) ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ (22) ಮೇಲೆ ಲೈಂಗಿನ ದೌರ್ಜನ್ಯ ಎಸಗಿರುವ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಚೆನೈನಲ್ಲಿ ಮಂಗಳವಾರ (ಅ.28) ನಡೆದಿದೆ.
ಆರೋಪಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಈತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹಾಗೆಯೇ ಈತನ ಮೋಟಾರ್ ಸೈಕಲ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಏನು?
ಪೊಲೀಸರ ಪ್ರಕಾರ, ಯುವತಿಯು ಸೋಮವಾರ ರಾತ್ರಿ ಚೆನ್ನೈನ ಪಕ್ಕಿಕರಣೈನಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಳು. ಈ ಚಾಲಕನಿಗೆ ತಾನು ಹಿಂದಿರುಗಿ ಬರುವವರೆಗೂ ಕಾಯುವಂತೆ ಹೇಳಿದ್ದಳು. ಇದಾದ ನಂತರ ಮನೆಗೆ ವಾಪಾಸ್ಸು ಬರುವ ಸಮಯದಲ್ಲಿ ಶಿವಕುಮಾರ್ ನಿರ್ಜನ ಪ್ರದೇಶಕ್ಕೆ ಮಹಿಳೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ನಂತರ ಆಕೆಯನ್ನು ಮನೆಗೆ ಬಿಟ್ಟಿದ್ದಾನೆ ಎಂದು ಮಹಿಳೆಯು ಆರೊಪಿಸಿ ದೂರು ನೀಡಿದ್ದಾಳೆ.
ಮಹಿಳೆಯ ದೂರಿನ ಆಧಾರದ ಮೇಲೆ ಚೆನ್ನೈನ ಟಿ 5 ವನಗರಂ ಪೊಲೀಸರು ವಿಚಾರಣೆ ನಡೆಸಿದ್ದು, ಅದು ನಿಜವೆಂದು ಕಂಡುಬಂದಿದೆ. ಹಾಗಾಗಿ ಆರೋಪಿ ಶಿವಕುಮಾರ್ನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿದ್ದು, ರಾಜ್ಯ ಪೊಲೀಸರು ಮತ್ತು ಆಡಳಿತಾರೂಢ ಡಿಎಂಕೆ ಆರೋಪಗಳನ್ನು ನಿರಾಕರಿಸುತ್ತವೆ ಎಂದು ಆರೋಪಿಸಿದ್ದಾರೆ. ಇತ್ತೀಚಿನ ಪ್ರಕರಣಗಳ ವಿಚಾರಣೆಗಳು ತ್ವರಿತ ನ್ಯಾಯಕ್ಕಾಗಿ ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ಹೇಳಿವೆ.


















