ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ “ವೋಟ್ ಚೋರ್ ಗದ್ದಿ ಚೋಡ್” ಸಹಿ ಅಭಿಯಾನವನ್ನು ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಯಿತು.
ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಬಿಜೆಪಿ ದೇಶದಾದ್ಯಂತ ಮತಗಳ್ಳತನ ನಡೆಸಿ ಅಧಿಕಾರ ಹಿಡಿದಿದೆ. ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯನ್ನು ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ 50 ಸಾವಿರ ಸಹಿ ಸಂಗ್ರಹಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸುತ್ತೇವೆ ಎಂದರು.
ಕಳೆದ ಬಾರಿ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಮತಗಳ್ಳತನ ನಡೆಸಿ ಗೆದ್ದಿರುವ ಅನುಮಾನವಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 10ರಷ್ಟು ಹೆಚ್ಚುವರಿ ಮತ ಚಲಾವಣೆಯಾಗಿತ್ತು. ಈ ರೀತಿಯ ಬೆಳವಣಿಗೆ ಹಿಂದಿನ ಯಾವುದೇ ಚುನಾವಣೆಯಲ್ಲೂ ಆಗಿರಲಿಲ್ಲ. ಇದು ಮತಗಳ್ಳತನಕ್ಕೆ ಪುಷ್ಟಿ ನೀಡುತ್ತಿದೆ ಎಂದು ದೂರಿದರು.
Lಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ ಮಾತನಾಡಿ, ಮಹಾರಾಷ್ಟ್ರ ಸಹಿತ ಬಿಜೆಪಿ ಅಧಿಕಾರ ಹಿಡಿದಿರುವ ಎಲ್ಲ ರಾಜ್ಯಗಳಲ್ಲಿಯೂ ಮತಗಳ್ಳತನ ನಡೆದಿದೆ. ಕರ್ನಾಟಕ ರಾಜ್ಯದಲ್ಲೂ ಮತಗಳ್ಳತನ ನಡೆಸಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಬಿಜೆಪಿಯ ಈ ದುಷ್ಕೃತ್ಯವನ್ನು ಬಯಲಿಗೆಳೆಯದಿದ್ದರೆ ದೇಶ ಅಧೋಗತಿಗೆ ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಮುಖಂಡರಾದ ಭುಜಂಗ ಶೆಟ್ಟಿ, ಸತೀಶ್ ಕುಮಾರ್ ಮಂಚಿ, ಡಾ. ಸುನೀತಾ ಶೆಟ್ಟಿ, ಬಿ. ಕುಶಲ ಶೆಟ್ಟಿ, ವಿಲಿಯಂ ಮಾರ್ಟಿಸ್, ಸತೀಶ್ ಕೊಡವೂರು, ಕೃಷ್ಣ ಶೆಟ್ಟಿ ಬಜಗೋಳಿ, ಪ್ರಖ್ಯಾತ್ ಶೆಟ್ಟಿ, ಸೌರಬ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.


















