ನಾಳೆ ಆಂಧ್ರಕ್ಕೆ ‘ಮೊಂಥ’ ಚಂಡಮಾರುತ: ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ!

ಆಂಧ್ರಪ್ರದೇಶ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಾಳೆ(ಅ.28) ಆಂಧ್ರಪ್ರದೇಶದ ಕರಾವಳಿ ಭಾಗದ ಜಿಲ್ಲೆಗಳಿಗೆ ಮೊಂಥಾ ಚಂಡಮಾರುತ(Cyclone) ಅಪ್ಪಳಿಸಲಿದ್ದು, ಈ ಹಿನ್ನೆಲೆ ಈ ಭಾಗದಲ್ಲಿ(ಕರಾವಳಿ) ಭಾರೀ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.

ಥೈಲ್ಯಾಂಡ್‌ನಿಂದ ‘ಮೋಂಥಾ’ ಎಂದು ಹೆಸರಿಸಲ್ಪಟ್ಟ ಈ ಚಂಡಮಾರುತವು, ಭಾರೀ ಮಳೆಯನ್ನು ತರುವ ಸಾಧ್ಯತೆಯಿರುವುದರಿಂದ ಆಂಧ್ರಪ್ರದೇಶದಲ್ಲಿ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.ಅಕ್ಟೋಬರ್ 28ರ ಸಂಜೆ ಅಥವಾ ರಾತ್ರಿ ಕಾಕಿನಾಡ ಬಳಿಯ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಚಂಡಮಾರುತ ಭೂಕುಸಿತವನ್ನು ನಿರೀಕ್ಷಿಸಲಾಗಿದೆ. ಇದರೊಂದಿಗೆ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಬಲವಾದ ಗಾಳಿ ಜೊತೆಗೆ ಭಾರೀ ಮಳೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದೆ.

ಇನ್ನು ಚಂಡಮಾರುತದ ಪ್ರಭಾವದಿಂದಾಗಿ ವಿಶಾಖಪಟ್ಟಣಂ ಕರಾವಳಿಯಲ್ಲಿ, ಋಷಿಕೊಂಡ ಮತ್ತು ಸಾಗರ್ ನಗರ ಕಡಲತೀರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಬಲವಾದ ಗಾಳಿ ಮತ್ತು ಎತ್ತರದ ಅಲೆಗಳ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಮತ್ತು ಕಣ್ಗಾವಲು ಬಿಗಿಗೊಳಿಸಿದ್ದಾರೆ. ಅಲ್ಲದೆ, ಪ್ರವಾಸಿಗರು ತೀರದಿಂದ ದೂರವಿರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.