ಎಲ್ ಐ ಸಿಗಿಂತ ವಿದೇಶಿ ಸಂಸ್ಥೆಗಳಲ್ಲೇ ಅದಾನಿ ಭಾರೀ ಹೂಡಿಕೆ!

ನವದೆಹಲಿ: ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್‌ಐಸಿ ಹಣ ಹೂಡಿರುವುದು ವಿದೇಶಿ ಮಾಧ್ಯಮ ವರದಿಗಳಿಂದ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದರೂ, ಅಸಲಿಗೆ ಅಮೆರಿಕ ಮತ್ತು ಜಾಗತಿಕ ವಿಮಾ ಕಂಪನಿಗಳೇ ಅದಾನಿ ಸಮೂಹದಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿರುವುದು ಬಯಲಾಗಿದೆ.

ಕಳೆದ ಜೂನ್‌ನಲ್ಲಿ ಅದಾನಿ ಪೋರ್ಟ್ಸ್ ಎಸ್‌ಇಝಡ್‌ನಲ್ಲಿ ಎಲ್‌ಐಸಿ 570 ದಶಲಕ್ಷ ಡಾಲರ್ (5,000 ಕೋಟಿ ರೂ.) ಹೂಡಿಕೆ ಮಾಡಿದ ಒಂದು ತಿಂಗಳಲ್ಲೇ ಅಮೆರಿಕದ ಅಥೆನೆ ಇನ್ಶೂರೆನ್ಸ್ ಕಂಪನಿಯು ಅದಾನಿ ಸಮೂಹದ ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ 6,650 ಕೋಟಿ ರೂ. (750 ದಶಲಕ್ಷ ಡಾಲರ್) ಹೂಡಿಕೆ ಮಾಡಿತು. ಹಲವು ಪ್ರಮುಖ ಅಂತಾರಾಷ್ಟ್ರೀಯ ವಿಮಾ ಕಂಪನಿಗಳೂ ಇದನ್ನು ಅನುಸರಿಸಿದವು.

ಅಥೆನೆಯ ಮೂಲ ಕಂಪನಿಯಾದ ಅಪೊಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್ ಜೂನ್ 23ರ ತನ್ನ ಅಧಿಕೃತ ಸ್ಟೇಟ್‌ಮೆಂಟ್‌ನಲ್ಲೇ ಈ ವಿಷಯವನ್ನು ದೃಢಪಡಿಸಿದೆ. ಇದು ಅದಾನಿ ಕಂಪನಿಯಲ್ಲಿ ಅಪೊಲೊದ ಎರಡನೇ ದೊಡ್ಡ ಹೂಡಿಕೆ. ಹಿಂದೆಯೂ ಅದು ಹೂಡಿಕೆ ಮಾಡಿತ್ತು. ಅದಾನಿ ಗ್ರೀನ್ ಎನರ್ಜಿಯಲ್ಲಿ ಡಿಬಿಎಸ್ ಬ್ಯಾಂಕ್, ಡಿಜಡ್ ಬ್ಯಾಂಕ್, ರಾಬೋಬ್ಯಾಂಕ್, ಬ್ಯಾಂಕ್ ಸಿನೋಪ್ಯಾಕ್ ಸೇರಿದಂತೆ ಜಾಗತಿಕ ಸಂಸ್ಥೆಗಳು ಸುಮಾರು 250 ದಶಲಕ್ಷ ಡಾಲರ್ ಹೂಡಿಕೆ ಮಾಡಿವೆ.

ಒಟ್ಟಾರೆ ಈ ವರ್ಷದ ಮೊದಲಾರ್ಧದಲ್ಲಿ ಅದಾನಿ ಸಮೂಹದ ಬಂದರು ಘಟಕ, ನವೀಕರಿಸಬಹುದಾದ ಇಂಧನ, ವಿದ್ಯುತ್ ಸಾಗಾಣಿಕೆ ಘಟಕ ಮತ್ತು ಫ್ಲ್ಯಾಗ್‌ಶಿಪ್ ಕಂಪನಿಗಳಲ್ಲಿ ವಿವಿಧ ಕಂಪನಿಗಳು 10 ಶತಕೋಟಿ ಡಾಲರ್‌ಗೂ ಹೆಚ್ಚು ಹಣ ಹೂಡಿವೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ರೇಟಿಂಗ್ಸ್‌ನ ಆಗಸ್ಟ್ ತಿಂಗಳ ವರದಿ ಹೇಳುತ್ತದೆ.