ಡಾಕ್ಟ್ರ್ ಆಯ್ ಫ್ರೀಯಾಗಿ ಬಡವರ ಸೇವೆ ಮಾಡ್ತೆ ಎಂದಳು ಮಲೇಷ್ಯಾ ಯೋಗ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮರವಂತೆಯ ಹುಡುಗಿ !

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: “ಹಳ್ಳಿ ಬದೆಗೆಲ್ಲಾ ಎಷ್ಟೋ ರೋಗಿಗಳ್ ಹಾಸ್ಪಿಟಲ್‌ಗೆ ಹೋಪುಕ್ ಐದೆ ಹಾಂಗೆ ಸತ್ತ್ ಹೋತಿದ್ರ್. ನಂಗೆ ಮುಂದೆ ಡಾಕ್ಟ್ರ್ ಐಕ್ ಅಂದೇಳಿ ಭಾರೀ ಆಸಿ ಇತ್ತ್. ಯೋಗ ಮಾಡುದ್ರ್ ಒಟ್ಟಿಗ್ ನಾನ್ ಕಷ್ಟ ಪಟ್ ಡಾಕ್ಟ್ರ್ ಓದಿ ಹಳ್ಳಿಯಲ್ಲಿಪ್ಪು ರೋಗಿಗಳಿಗೆಲ್ಲಾ ಫ್ರೀಯಾಗಿ ಔಷಧಿ ಕೊಡ್ತೆ”

ಹೀಗೆ ನಗು ನಗುತ್ತಾ ಕುಂದಾಪುರ ಕನ್ನಡದಲ್ಲಿ ಅನಿಸಿಕೆ ಹಂಚಿಕೊಂಡಿದ್ದು ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮರವಂತೆಯ ೧೧ರ ಹರೆಯದ ಪುಟಾಣಿ ಧನ್ವಿ ಪೂಜಾರಿ ಮರವಂತೆ.

ಮಲೇಷ್ಯಾದ ಕೌಲಾಲಂಪುರದಲ್ಲಿರುವ ಎಸ್‌ಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಫೌಂಡೇಶನ್ ಕಾಲೇಜ್ ಎಂಡ್ ರಿಸರ್ಚ್ ಸೆಂಟರ್‌ನಲ್ಲಿ ಅ. ೧೨, ೧೩ರಂದು ನಡೆದ ಟ್ರ್ಯಾಕ್ಸ್ ಇಂಟರ್‌ನ್ಯಾಶನಲ್ ಯೋಗ ಕಾರ್ನಿವಲ್‌ನಲ್ಲಿ ನಡೆದ ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದು ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಮರವಂತೆಯ ೧೧ರ ಹರೆಯದ ಧನ್ವಿ ಪೂಜಾರಿ ಮಾಧ್ಯಮಗಳ ಜೊತೆ `ಕುಂದಾಪುರ ಕನ್ನಡ’ದಲ್ಲೇ ಮಾತನಾಡಿ ಅಂಭ್ರಮದ ಕ್ಷಣಗಳನ್ನು ಹಂಚಿಕೊಂಡರು.

ಇಂಡಿಯನ್ ಬಟರ್ ಫ್ಲೈ:
ಸ್ಪರ್ಧೆಯಲ್ಲಿ ೭ ದೇಶಗಳು ಭಾಗವಹಿಸಿದ್ದು ಆರಂಭದಲ್ಲಿ ಕೊಂಚ ಭಯ ಇತ್ತು. ಗುರುವಿಲ್ಲದೆ ಯೋಗ ತರಬೇತಿ ನಡೆಸಿದ್ದು, ಮಲೇಷ್ಯಾಕ್ಕೆ ತೆರಳುವ ಮುನ್ನಾ ಸುಬ್ಬಯ್ಯ ದೇವಾಡಿಗ ಅವರು ಮಾರ್ಗದರ್ಶನ ನೀಡಿದರು. ಮಲೇಷ್ಯಾದಲ್ಲಿ ಎಲ್ಲರೂ ನನ್ನ ಬಳಿ ಸೆಲ್ಫಿ ಕೇಳಿದ್ದರು. ನಾನಲ್ಲಿ ಡ್ಯಾನ್ಸ್ ಮಾಡುತ್ತಿದ್ದಂತೆಯೇ ನನಗೆ ಇಂಡಿಯನ್ ಬಟರ್ ಫ್ಲೈ ಎಂದು ಹೆಸರಿಟ್ಟರು ಎಂದು ಪುಟಾಣಿ ಧನ್ವಿ ಪೂಜಾರಿ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡರು.

ಅಮ್ಮನ ಜೊತೆ ಮಗಳು

ವಿನಯ್ ಗುರೂಜಿ ಆಶೀರ್ವಾದ:
ದಿನನಿತ್ಯ ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಹಾಗೂ ರಾತ್ರಿ ಸಮಯ ಸಿಕ್ಕಲ್ಲಿ ಅಭ್ಯಾಸ ಮಾಡುತ್ತಿದ್ದೆ. ಯೋಗ ಹಾಗೂ ಡ್ಯಾನ್ಸ್ ಮುಂದುವರೆಸುವೆ. ನಾನು ಈ ಸಾಧನೆ ಮಾಡಲು ಉದ್ಯಮಿ ಸಂಗಮ್ ಸುಭಾಷ್ ಸೇರಿದಂತೆ ಹಲವು ಸಂಘಸಂಸ್ಥೆಗಳು, ಹಾಗೂ ದಾನಿಗಳು, ಮಿರಾಕಲ್ ನೃತ್ಯ ತರಬೇತಿ ಕೇಂದ್ರದವರು, ಮನೆಯವರು ಸಹಕರಿಸಿದ್ದಾರೆ. ಅಲ್ಲದೇ ಅವಧೂತ ವಿನಯ್ ಗುರೂಜಿಯವರು ನನ್ನನ್ನು ಹರಸಿ ಗೆದ್ದು ಬರುತ್ತೀಯಾ ಎಂದು ಆಶೀರ್ವಾದ ನೀಡಿದ್ದರು ಎಂದು ಧನ್ವಿ ಹೇಳಿದ್ದಾರೆ.

ಬಹುಮುಖ ಪ್ರತಿಭೆ ಧನ್ವಿ ಮರವಂತೆ:
ತ್ರಾಸಿಯ ಡಾನ್ ಬೋಸ್ಕೊ ಶಾಲೆಯಲ್ಲಿ ೬ ನೆ ತರಗತಿಯಲ್ಲಿ ಕಲಿಯುತ್ತಿರುವ ಧನ್ವಿ ಬಹುಮುಖ ಪ್ರತಿಭಾನ್ವಿತೆಯಾಗಿದ್ದು ಸುಮಾರು ೨೦ ಯೋಗಾಸನಗಳಲ್ಲಿ ಉತ್ಕೃಷ್ಟತೆ ಸಾಧಿಸಿದ್ದಾಳೆ. ಕಲಿಕೆಯಲ್ಲೂ ಮುಂದಿರುವುದರ ಜತೆಗೆ ನೃತ್ಯ ವೈವಿಧ್ಯಗಳಲ್ಲಿ ಕುಂದಾಪುರದ ಪ್ರವೀಣ್ ನೇತೃತ್ವದ ಮಿರಕಲ್ ಡಾನ್ಸ್ ಗ್ರೂಪ್‌ನಿಂದ ಪರಿಣತಿ ಪಡೆದು, ಪ್ರದರ್ಶನ ನೀಡಿ ಪಾರಿತೋಷಕ ಗಳಿಸಿದ್ದಾಳೆ.

ತುಂಬ ಚೂಟಿಯಾಗಿರುವ ಈ ಹುಡುಗಿಗೆ ನಟನಾ ಚಾತುರ್ಯ, ಯಕ್ಷಗಾನ, ಭರತನಾಟ್ಯ, ಸ್ಕೇಟಿಂಗ್, ಏಕಪಾತ್ರ ಅಭಿನಯ, ಮುಂತಾದ ಪ್ರಾವಿಣ್ಯತೆ ಈಕೆಗಿದೆ. ಧನ್ವಿ ಮರವಂತೆಯ ಶಿವಮ್ಮಾಸ್ತಿಮನೆ ಚಂದ್ರಶೇಖರ ಪೂಜಾರಿ-ಜ್ಯೋತಿ ದಂಪತಿಯ ಪುತ್ರಿ. ಅಣ್ಣ ವೇದಾಂತ್ ೯ನೆ ತರಗತಿ ವಿದ್ಯಾರ್ಥಿ.

ಅದ್ದೂರಿ ಸ್ವಾಗತ:
ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದು ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಮರವಂತೆಯ ೧೧ರ ಹರೆಯದ ಧನ್ವಿ ಪೂಜಾರಿಯವರಿಗೆ ಕುಂದಾಪುರದಲ್ಲಿ ಗುರುವಾರ ಬೆಳಿಗ್ಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ಧನ್ವಿ ಕುಂದಾಪುರ ಶಾಸ್ತ್ರೀ ಸರ್ಕಲ್‌ಗೆ ಆಗಮಿಸುತ್ತಿದ್ದಂತೆಯೇ ಕುಂದಾಪುರ ತಾಲೂಕು ಬಿಲ್ಲವ ಸಂಘ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಧನ್ವಿಯವರಿಗೆ ಅಭಿನಂದಿಸಿ ತೆರದ ವಾಹನದಲ್ಲಿ ಕುಂದಾಪುರದಿಂದ ಮರವಂತೆಯವರೆಗೆ ಮೆರವಣಿಗೆ ಮೂಲಕ ಕರೆದೊಯ್ದರು.

ಈ ಸಂದರ್ಭ ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜುಪೂಜಾರಿ, ಬಿಲ್ಲವ ಮುಖಂಡರಾದ ಮಂಜು ಬಿಲ್ಲವ, ಭಾಸ್ಕರ ಬಿಲ್ಲವ, ನಾರಾಯಣಗುರು ಯುವಕಮಂಡಲ, ಮೈಲಾರೇಶ್ವರ ಯುವಕ ಮಂಡಲ, ರಾಯಲ್ ಕ್ಲಬ್, ಕುಂದಾಪುರ ಜೆಸಿಐ, ಸಂಗಮ್ ಫ್ರೆಂಡ್ಸ್ ಕುಂದಾಪುರ, ಕುಂದಾಪುರ ಪುರಸಭೆಯ ಸದಸ್ಯರುಗಳು, ಮಿರಾಕಲ್ ಡಾನ್ಸ್ ಅಕಾಡೆಮಿ ಮುಖ್ಯಸ್ಥ ಪ್ರವೀಣ್ ಬಾಳಿಕೆರೆ, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ಮನ್ಸೂರ್ ಮರವಂತೆ, ಹುಸೇನ್ ಹೈಕಾಡಿ, ಸುರೇಂದ್ರ ಸಂಗಮ್, ದಿವಾಕರ ಕಡ್ಗಿ ಮೊದಲಾದವರಿದ್ದರು.