ಉಡುಪಿ: ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ವಜ್ರ ಮಹೋತ್ಸವ ಪ್ರಯುಕ್ತ ಉಡುಪಿ ಮತ್ತು ಸಂತೆಕಟ್ಟೆ-ಕಲ್ಯಾಣಪುರ ಶಾಖೆಯ ಸದಸ್ಯ ಗ್ರಾಹಕರ ಸಮಾವೇಶ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಬಾರಕೂರು-ಚೌಳಿಕೆರೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವಾಸ್ತುಶಾಸ್ತ್ರಜ್ಞ ಬಿ. ರಾಘವೇಂದ್ರ ಭಟ್ ಮಾತನಾಡಿ, ಬದುಕಿನಲ್ಲಿ ಸಹನೆ ತಾಳ್ಮೆ ಇರಿಸಿಕೊಂಡು ವ್ಯವಹರಿಸಬೇಕು.ಆಗ ಎಲ್ಲವೂ ಸಮರ್ಪಕವಾಗಿ ಮುನ್ನಡೆಯಲಿದೆ. ಉತ್ತಮ ಸೇವೆ ನೀಡುತ್ತಾ ನಡೆಯುತ್ತಿರುವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅವರು, ಪ್ರಸ್ತುತ ಉಳಿತಾಯ ಮಾಡದೇ ಇದ್ದರೆ ಬದುಕುವುದಕ್ಕೆ ಕಷ್ಟ ಸಾಧ್ಯವಾಗುತ್ತದೆ. ಯಾವಾಗ ಯಾವ ಕಷ್ಟ ಎದುರಾಗಲಿದೆ ಎಂದು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಸಂಸ್ಥೆಗೆ ಗಟ್ಟಿ ಅಡಿಪಾಯಿವನ್ನು ಹಾಕಿಕೊಟ್ಟ ದಿ.ಪಾಲ್ಕೆ ಬಾಬುರಾಯ ಅವರನ್ನು ಸ್ಮರಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ರಾಜು ಎನ್. ಆಚಾರ್ಯ, ವೆಂಕಟೇಶ ಆಚಾರ್ಯ, ರವಿಚಂದ್ರ ಮಾರಾಳಿ ಶುಭಾಶಂಸನೆಗೈದರು. ಗ್ರಾಹಕ ರಾದ ಮುರಳೀಧರ ಆಚಾರ್ಯ, ಬಿ.ಎ. ಆಚಾರ್ಯ ಮಣಿಪಾಲ, ಸಂಧ್ಯಾ ಲಕ್ಷಣ್ ಆಚಾರ್ಯ, ಸದಾನಂದ ನಾಯಕ್ ಮಾತನಾಡಿದರು.
ಉಡುಪಿ ಮತ್ತು ಸಂತೆಕಟ್ಟೆ ಶಾಖೆಯ ಒಟ್ಟು 12 ಮಂದಿ ಉತ್ತಮ ಗ್ರಾಹಕರನ್ನು ಸಮ್ಮಾನಿಸಲಾಯಿತು. ನಿರ್ದೇಶಕರಾದ ವಿ. ಜಯ ಆಚಾರ್, ಕೆ. ಯಜ್ಞೆಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ,ರೋಹಿಣಿ ಎಂ.ಪಿ, ನಿವೃತ್ತ ಶಾಖಾ ವ್ಯವಸ್ಥಾಪಕರಾದ ಸೀತಾರಾಮ ಆಚಾರ್ಯ, ವಾಸುದೇವ ಆಚಾರ್ಯ, ನಾಗರಾಜ ಪ್ರಭು, ಬಿ. ಅನಂತಪದ್ಮನಾಭ ಉಪಾಧ್ಯ, ಲಕ್ಷ್ಮೀ ನಾರಾಯಣ ಬಿ. ಆಚಾರ್, ವಿನೋದಾ, ಸುಮಿತ್ರಾ ಉಪಸ್ಥಿತರಿದ್ದರು.
ಉಡುಪಿ ಶಾಖಾ ಪ್ರಭಾರ ವ್ಯವಸ್ಥಾಪಕ ಶ್ರೀಕಾಂತ್ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಸಂತೆಕಟ್ಟೆ-ಕಲ್ಯಾಣಪುರ ಪ್ರಭಾರ ಶಾಖಾ ವ್ಯವಸ್ಥಾಪಕ ಸಂದೇಶ್ ವಂದಿಸಿದರು. ಭಾರತಿ ಜಯಕರ್ ಉಡುಪಿ ನಿರೂಪಿಸಿದರು.















