ಅ.26ರಂದು ಕೃಷ್ಣಮಠದಲ್ಲಿ ‘ಭರತಮುನಿ ಜಯಂತ್ಯುತ್ಸವ’

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆಯ 23ನೇ ವರ್ಷದ ಭರತಮುನಿ ಜಯಂತ್ಯುತ್ಸವವನ್ನು ಇದೇ ಅ. 26ರಂದು ನಗರದ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿದುಷಿ ವೀಣಾ ಮುರಳೀಧರ ಸಾಮಗ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು‌ ಉದ್ಘಾಟಿಸಲಿದ್ದಾರೆ. ಕಿರಿಯ ಯತಿಗಳಾದ ಸುಶೀಂಧ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಂಜೇಶ್ವರ “ನಾಟ್ಯನಿಲಯಂ” ಗುರು ವಿದ್ವಾನ್ ಬಾಲಕೃಷ್ಣ ಬಿ. ಹಾಗೂ ಶಿವಮೊಗ್ಗ ನಟನಂ ಬಾಲ ನಾಟ್ಯ ಕೇಂದ್ರದ ನಿರ್ದೇಶಕ ಡಾ. ಎಸ್ ಕೇಶವ್ ಕುಮಾರ್ ಪಿಳ್ಳೈ ಅವರಿಗೆ ಭರತ ಪ್ರಶಸ್ತಿ‌ ಪ್ರದಾನ ಮಾಡಲಾಗುವುದು. 170 ಗಂಟೆಗಳ ಕಾಲ ನಿರಂತರ ನೃತ್ಯ ಕಾರ್ಯಕ್ರಮ ನೀಡಿ ವರ್ಲ್ಡ್ ರೆಕಾರ್ಡ್ ಮಾಡಿದ ನೃತ್ಯ ಕಲಾವಿದೆ ರೆಮೊನಾ ಇವೆಟೆ ಪೆರೆರಾ ಹಾಗೂ 216 ಗಂಟೆಗಳ ಕಾಲ ನಿರಂತರ ನೃತ್ಯ ಕಾರ್ಯಕ್ರಮ ನೀಡಿ ವರ್ಲ್ಡ್ ರೆಕಾರ್ಡ್ ಮಾಡಿದ ನೃತ್ಯ ಕಲಾವಿದೆ ವಿದುಷಿ ದೀಕ್ಷಾ ಅವರಿಗೆ ಕಲಾರ್ಪಣ ಪ್ರಶಸ್ತಿ ನೀಡಲಾಗುವುದು. ಹಾಗೆಯೇ ವಿದುಷಿಗಳಾದ ಶ್ರಾವ್ಯ ರಾವ್, ಮೇಘನಾ ಭಟ್, ಸಹನಾ ದೀಪ್ತಿ, ಮೇಧಾ ತಂತ್ರಿ ಮತ್ತು ಸಿಂಚನ ಜಿ.ಕೆ. ಅವರಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಮಧ್ಯಾಹ್ನ 12ಗಂಟೆಗೆ ರಾಧಾಕೃಷ್ಣ ನೃತ್ಯನಿಕೇತನ ಸಂಸ್ಥೆಯ ಶಿಷ್ಯರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ರಾಧಾಕೃಷ್ಣ ನೃತ್ಯ ನಿಕೇತನದ ವಿದ್ಯಾರ್ಥಿಗಳು “ನೃತ್ಯ ಸಿಂಚನ” ಭರತನಾಟ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 7 ಗಂಟೆಗೆ ರಾಧಾಕೃಷ್ಣ ನೃತ್ಯ ನಿಕೇತನದ ಶಿಷ್ಯರಿಂದ “ನೃತ್ಯಾಭಿಷೇಕಂ” ಕೂಚುಪುಡಿ ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಂ ಪೃಥ್ವಿರಾಜ್ ಸಾಮಗ, ವಿಶ್ವರೂಪ ಮಧ್ಯಸ್ಥ, ಅದಿತಿ ನಾಯಕ್, ರಾಧಿಕಾ, ಸ್ವಾತಿ ಉಪಾಧ್ಯಾಯ ಇದ್ದರು.