ಉಡುಪಿ: ಕೇಂದ್ರ ಸರ್ಕಾರದ ವತಿಯಿಂದ ಗರ್ಭಿಣಿ / ಬಾಣಂತಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನ ಲಭ್ಯವಿದ್ದು, ಮೊದಲ ಪ್ರಸವದ ಗರ್ಭಿಣಿಯು ಎಲ್.ಎಂ.ಪಿ ದಿನಾಂಕದಿಂದ 150 ದಿನಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮೊದಲನೇ ಕಂತಿನ ಅರ್ಜಿಯನ್ನು ನೋಂದಾಯಿಸಬೇಕು ಹಾಗೂ ಎರಡನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿ ಮತ್ತು 3 ನೇ ಚುಚ್ಚುಮದ್ದು ಪೂರ್ಣಗೊಂಡ ಬಳಿಕ ಅರ್ಜಿಯನ್ನು ನೋಂದಾಯಿಸಬಹುದಾಗಿದೆ.
ಮೊದಲನೆ ಕಂತಿನಲ್ಲಿ ರೂ.3000 ಹಾಗೂ ಎರಡನೇ ಕಂತಿನಲ್ಲಿ ರೂ. 2000 ನ್ನು (ಮಗುವಿನ ಜನನದ ನಂತರ 3 ನೇ ಚುಚ್ಚುಮದ್ದು ಪೂರ್ಣಗೊಂಡ ನಂತರ) ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ವರ್ಗಾಯಿಸಲಾಗುವುದು.
2 ನೇ ಪ್ರಸವದ ಬಾಣಂತಿ ಮಹಿಳೆಯರಿಗೆ ಹೆಣ್ಣು ಮಗು ಜನಿಸಿದಲ್ಲಿ ರೂ. 6000 ಸಹಾಯಧನ ದೊರೆಯಲಿದ್ದು, ಜನನದ ನಂತರ ಒಂದನೇ ಕಂತಿನಲ್ಲಿ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ವರ್ಗಾಹಿಸಲಾಗುವುದು (ಮಗು ಜನಿಸಿದ 270 ದಿನಗಳೊಳಗೆ ನೋಂದಾವಣೆಯಾಗಬೇಕು).
ನೋಂದಣಿಗೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ/ ಜಾತಿ ಮತ್ತು ಆದಾಯ ಪ್ರಮಾಣ ಪತ್ರ / ನರೇಗಾ ಕಾರ್ಡ್/ ಇ-ಶ್ರಮ್ ಕಾರ್ಡ್/ಆಯುಷ್ಮಾನ್ ಕಾರ್ಡ್ (ಯಾವುದಾದರೂ ಒಂದು ನಕಲು ಪ್ರತಿ, ಪೋಷಣಾ ಟ್ರ್ಯಾಕ್ಟರ್ನಲ್ಲಿ ಫೇಸ್ ಅಥೆಂಟಿಕೇಷನ್, ಫಲಾನುಭವಿಯ ಬ್ಯಾಂಕ್ ಖಾತೆ (ಎನ್.ಪಿ.ಸಿ.ಐ ಮ್ಯಾಪಿಂಗ್ ಕಡ್ಡಾಯ) ಪ್ರತಿ ಕಡ್ಡಾಯವಾಗಿದ್ದು, ಹೆಚ್ಚಿನ ವಿವರಗಳಿಗೆ ಸಮೀಪದ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ, ಮಹಿಳಾ ಮೇಲ್ವಿಚಾರಕಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.


















