ಉಡುಪಿಯಲ್ಲಿ ದೀಪಾವಳಿ ಸಂಭ್ರಮ: ಶ್ರೀಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ ಸಂಪನ್ನ

ಉಡುಪಿ: ದೇವಾಲಯಗಳ ನಗರಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ಸೋಮವಾರ ರಾತ್ರಿ ಸಂಭ್ರಮದ ಬಲೀಂದ್ರ ಪೂಜೆ ನಡೆಯಿತು.

ತುಳುನಾಡಿನಲ್ಲಿ ಬಲೀಂದ್ರ ಪೂಜೆಗೆ ವಿಶೇಷ ಮಹತ್ವವಿದೆ. ಈ ಭಾಗವನ್ನು ಆಳಿದ ಅರಸ ಬಲೀಂದ್ರನಿಗೆ ದೀಪಾವಳಿಯ ವೇಳೆ ಸ್ವಾಗತ ಕೋರಿ ಆತಿಥ್ಯ ನಡೆಸುವುದು ಇಲ್ಲಿನ ಪದ್ಧತಿ. ವರ್ಷಕ್ಕೊಮ್ಮೆ ಅರಸನನ್ನು ಬರಮಾಡಿಕೊಂಡು ಗೌರವಿಸುವುದು ಸಂಪ್ರದಾಯ. ಈ ಆಚರಣೆಯನ್ನು ಬಲೀಂದ್ರ ಪೂಜೆ ಎಂದು ಕರೆಯಲಾಗುತ್ತದೆ.

ಭತ್ತದ ಗದ್ದೆಗಳಲ್ಲಿ ದೀಪವಿಟ್ಟು ಬಲೀಂದ್ರನನ್ನು ಕೂಗಿ ‌ಕರೆಯಲಾಗುತ್ತದೆ. ಕೃಷಿ ಸಂಸ್ಕೃತಿಯೊಂದಿಗೆ ಬಲೀಂದ್ರ ಪೂಜೆ ತಳಕು ಹಾಕಿಕೊಂಡಿರುವುದರಿಂದ ಇವತ್ತಿಗೂ ಈ ಪದ್ಧತಿ ಇಲ್ಲಿ ಜೀವಂತವಾಗಿದೆ.

ಶ್ರೀಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ ನಡೆಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ಹಾಜರಿದ್ದರು. ಮಠದ ಪುರೋಹಿತರಾದ ಶ್ರೀನಿವಾಸ ಅವರು ಪೂಜೆ ನಡೆಸಿದರು. ಬಳಿಕ ಪಂಚದೀಪ ಪ್ರಜ್ವಲನೆಯೊಂದಿಗೆ ವಾದ್ಯಮೇಳ ಸಹಿತ ಮಠದ ಎಲ್ಲ ಭಾಗಗಳಿಗೂ ದೀಪ ಹಚ್ಚಿ ಪೂಜಿಸಲಾಯಿತು. ಸಾಂಪ್ರದಾಯಿಕ ಆಚರಣೆಗೆ ನೂರಾರು ಭಕ್ತರು ಸಾಕ್ಷಿಯಾದರು.