ಕಣ್ಣ ಕೋರೈಸುವ ಅಲಂಕಾರಿಕ ಬಲ್ಬುಗಳ ಬೆಳಕು, ವಾಹನಗಳ ಮಿಣಿ ಮಿಣಿ ಬೆಳಕು ದಿನನಿತ್ಯವೂ ನಮ್ಮ ಬೆನ್ನಟ್ಟುತ್ತಿದ್ದರೂ ದೀಪಾವಳಿಗೆ ಮಾತ್ರ ಜಿಗ್ಗೆಂದು ಹೊಳೆಯುವ ಸಾಲು ಸಾಲು ಹಣತೆಗಳ ಫಳಫಳ ಹೊಳಪಿದೆಯಲ್ಲವಾ, ಅದು ಎದೆಯೊಳಗೆ ಎಬ್ಬಿಸುವ ಭಾವತರಂಗಗಳು ಮುಗಿಲಿನಷ್ಟೆ ಮಿಗಿಲು. ಎಷ್ಟೇ ಕತ್ತಲಲ್ಲಿದ್ದರೂ ಈ ದೀಪಾವಳಿಯ ಹಣತೆಯ ಹೊಂಬೆಳಕಿಗೆ ಸುಮ್ಮನೆ ಕಣ್ಣು ತೇಲಿಸಿಬಿಟ್ಟರೆ, “ಆಹಾ ದೀಪಾವಳಿ ಬಂತು” ಎಂದು ಮೊದಲೇ ಹೊಳಪೇರಿದ್ದ ಕಣ್ಣು, ಸಾವಿರ ಮೆಗಾ ವ್ಯಾಟ್ ಭರವಸೆಯ ವಿದ್ಯುತ್ ತುಂಬಿಕೊಂಡು ಬೆಳಕಿನ ಜಾತ್ರೆಯಾಗುತ್ತದೆ.

ದೀಪ, ಪಟಾಕಿ, ಗೂಡುದೀಪ, ರುಚಿ ಹತ್ತಿಸುವ ಹಬ್ಬದ ಖಾದ್ಯಗಳು, ಎಲ್ಲವೂ ಖುಷಿಯನ್ನೇ ತುಂಬಿಕೊಂಡಿರುವುದರಿಂದ ನಮ್ಮೊಳಗೂ ನೆಮ್ಮದಿ, ಆಸೆ, ಹರುಷ, ಜೀವನೋತ್ಸಾಹದ ಹೂಬಾಣಪಟಾಕಿ ಹೊತ್ತಿಕೊಂಡು ಆಕಾಶಕ್ಕೆ ಚಿಮ್ಮುತ್ತದೆ. ಒಬ್ಬರ ಭಾವಗಳ ಬಿಂಬ ಇನ್ನೊಬ್ಬರ ಕಣ್ಣಲ್ಲಿ ಪ್ರತಿಬಿಂಬವಾಗಿ ಜೊತೆಗಿದ್ದವರೆಲ್ಲಾ ಹೊಳೆದುಬಿಡೋದು ಇದೇ ದೀಪಾವಳಿಗೆ.

ಮೈಮನವೆಲ್ಲಾ ತುಂಬಿಕೊಂಡ ಆ ಬೆಳಕಿನ ತೂಗುದೀಪ, “ನಿನ್ನೊಳಗನ್ನು, ನಿನ್ನ ಭಾವ ಪ್ರಪಂಚವನ್ನು, ಕತ್ತಲೆಯೇ ತುಂಬಿಕೊಂಡ ನಿನ್ನ ದಾರಿಯನ್ನು ಹೊಸತಾಗಿ ಕಂಡುಕೋ ಮಾರಾಯ” ಎಂದು ಮೊಗೆಮೊಗೆದು ಬೆಳಕಿನ ಹಾಲುಬಾಯಿ ತಿನ್ನಿಸಿದಾಗ ಈ ದೀಪಗಳ ಹಬ್ಬ ಸಾರ್ಥಕ. ಸಕಾರಾತ್ಮಕ ಭಾವನೆಗಳನ್ನು ಮಡಿಲಲ್ಲಿಟ್ಟು ಪೋಷಿಸುವ ದೀಪಾವಳಿ ಹಬ್ಬ ಹತ್ತಿರಾದಾಗಲೆಲ್ಲಾ, ಗಾಢವಾಗಿ ಪ್ರೀತಿಸಿದ ವ್ಯಕ್ತಿ ಇನ್ನೇನು ಮನೆಗೇ ಬರುತ್ತಿದ್ದಾನೆ ಎನ್ನುವಷ್ಟು ಸಡಗರ. ಅಶಾಂತಿ, ಅಸಹನೆ, ಸಿಟ್ಟು ಎಲ್ಲವನ್ನೂ ಎತ್ತಂಗಡಿ ಮಾಡಿ ಮತ್ತೆ ಎದೆಯೊಳಗೆ ಹದವಾದ ನವಿರು ಭಾವನೆಗಳನ್ನೆಲ್ಲಾ ಬಿತ್ತುವ, ನಮ್ಮೊಳಗಿನ ಭಾವಗಳ ಆಳ ಹೊಕ್ಕು ನಿರಾಳ ಮಾಡುವ, ಭಾವಗಳ ಬೀಸಣಿಗೆಯನ್ನು ಬೆಳಕು ಆರದಂತೆ ಬೀಸುವ ಈ ದೀಪಾವಳಿ ಅನ್ನೋ ಬೆಳಕಿನ ಎದೆಗೆ ಇನ್ನಷ್ಟು ಮೈಯೊಡ್ಡಿಕೊಳ್ಳೋಣ.
-ಪ್ರಸಾದ ಶೆಣೈ ಆರ್ ಕೆ





















































