ಜಲ್ನಾ: ನಗರದ ಯಶವಂತ್ ನಗರ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಬೀದಿನಾಯಿಗಳ ಹಿಂಡು ನಡೆಸಿದ ದಾಳಿಗೆ ಮೂರು ವರ್ಷದ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ನಡೆದಿದೆ.
ಪಾರಿ ಗೋಸ್ವಾಮಿ (3) ಮೃತ ಬಾಲಕಿ. ರವಿವಾರ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಬಿಹಾರಕ್ಕೆ ತೆರಳಬೇಕಿದ್ದ ಪಾರಿ, ಕೊನೆಗಳಿಗೆಯಲ್ಲಿ ತಂದೆಯೊಂದಿಗೆ ಉಳಿಯಲು ನಿರ್ಧರಿಸಿದ್ದಳು. ಸೋಮವಾರ ಮುಂಜಾನೆ 3.30ರ ಸುಮಾರಿಗೆ ತಂದೆ ಗಾಢ ನಿದ್ರೆಯಲ್ಲಿದ್ದಾಗ ತಾಯಿಯನ್ನು ಹುಡುಕುತ್ತಾ ಪಾರಿ ಮನೆಯಿಂದ ಹೊರಬಂದಿದ್ದಾಳೆ. ಈ ವೇಳೆ ಬೀದಿಯಲ್ಲಿ ಅಲೆಯುತ್ತಿದ್ದ ಬಾಲಕಿಯನ್ನು ಸುತ್ತುವರಿದ ಬೀದಿನಾಯಿಗಳ ಗುಂಪು, ಆಕೆಯ ಮೇಲೆ ದಾಳಿ ನಡೆಸಿ ಸಮೀಪದ ಖಾಲಿ ಜಾಗಕ್ಕೆ ಎಳೆದೊಯ್ದಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ತತ್‌ಕ್ಷಣ ನಾಯಿಗಳನ್ನು ಓಡಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೂ ಮುನ್ನವೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಅಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ನಡೆಸುತ್ತಿದ್ದಾರೆ.


















