ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಅಂಗವಾಗಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.ಜಲಪೂರಣ ಶಾಸ್ತ್ರದ ಅಂಗವಾಗಿ ಮಠದ ಪುರೋಹಿತರು ಕಲಶಪೂಜೆ ಮಾಡಿದರು.

ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ಮಾಡಲಾಯಿತು. ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ಮಾಡಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.

ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಪಾದರು ಜಗತ್ತಿನ ಎಲ್ಲ ಭಕ್ತರಿಗೂ ಒಳ್ಳೆಯದಾಗಬೇಕು, ಶಾಂತಿ ಸಿಗಬೇಕು. ಭಗವಂತನ ಅನುಗ್ರಹವಿದ್ದರೆ ಜನರಿಗೆ ಶಾಂತಿ ಸಿಗುತ್ತದೆ ಎಂದು ಶುಭಾಶೀರ್ವಾದ ಮಾಡಿದರು. ದೀಪಾವಳಿ ಹಬ್ಬದ ಮಹತ್ವವನ್ನು ನಾಡಿನ ಸಮಸ್ತ ಜನತೆಗೆ ತಿಳಿಸಿ ಶುಭಹಾರೈಸಿದರು.


















