ಪುತ್ತೂರು: ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ತಕ್ಷಿತ್ (20) ಅವರ ಮೃತದೇಹ ಬೆಂಗಳೂರಿನ ವಸತಿಗೃಹದಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ಮೂಡಿದೆ.
ತಕ್ಷಿತ್ ಕುಟುಂಬ ಮೂಲತ ತಮಿಳುನಾಡಿನವರು. ಸೇಡಿಯಾಪಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗಿನಿಂದ ತಕ್ಷಿತ್ ತಂದೆ ಪ್ರಸಾದ್ ಅವರು ಮಗನ ಮೊಬೈಲ್‌ಗೆ ಕರೆ ಮಾಡುತ್ತಿದ್ದರೂ ಆತ ಕರೆ ಸ್ವೀಕರಿಸಿರಲಿಲ್ಲ. ಸಂಜೆ ವೇಳೆಗೆ ಮಡಿವಾಳ ಪೊಲೀಸರು ಕರೆ ಮಾಡಿ ತಕ್ಷಿತ್ ವಸತಿಗೃಹದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಮಾಹಿತಿ ನೀಡಿದರು.
ಹಲವು ವರ್ಷಗಳಿಂದ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ತಮಿಳು ಕಾಲನಿಯಲ್ಲಿ ವಾಸಿಸುತ್ತಿದ್ದು, ಬಳಿಕ ಅಲ್ಲಿಂದ ಸೇಡಿಯಾಪಿನ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು. ತಕ್ಷಿತ್ ಕೊಠಡಿ ಪಡೆಯಲು ನೀಡಿದ್ದ ಆಧಾರ್ ಕಾರ್ಡಿನಲ್ಲಿ ಕೌಡಿಚ್ಚಾರಿನ ವಿಳಾಸವಿದ್ದ ಕಾರಣ ಆರಂಭದಲ್ಲಿ ಮಡಿವಾಳ ಪೊಲೀಸರು ಆ ವಿಳಾಸವನ್ನು ಸಂಪರ್ಕಿಸಿದ್ದರು. ಅಲ್ಲಿ ಅವರ ಸಂಬಂಧಿಕರು ಪೂರಕ ಮಾಹಿತಿ ನೀಡಿದ್ದರು.
ತಕ್ಷಿತ್ ಅವರು ಸೇಡಿಯಾಪಿನಲ್ಲಿ ತನ್ನ ತಂದೆ ತಾಯಿ ಮತ್ತು ಅಕ್ಕನೊಂದಿಗೆ ವಾಸವಾಗಿದ್ದರು. ಅಕ್ಕನಿಗೆ ವಿವಾಹವಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ತಮಿಳುನಾಡಿನಲ್ಲೇ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿ ಜತೆ ವಸತಿಗೃಹದಲ್ಲಿ ವಾಸ:
ತಕ್ಷಿತ್ ಮಂಗಳೂರು ಪಣಂಬೂರಿನ ಕಾಲೇಜೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಅದೇ ಕಾಲೇಜಿನಲ್ಲಿ ವೀರಾಜಪೇಟೆಯ ವಿದ್ಯಾರ್ಥಿನಿಯೋರ್ವಳೂ ಇದ್ದಳು. ಆದರೆ ಬ್ಯಾಕ್‌ಲಾಗ್ ಕಾರಣದಿಂದ ಇಬ್ಬರೂ ಕಾಲೇಜು ಬಿಟ್ಟಿದ್ದರು ಎನ್ನಲಾಗಿದೆ. ತಕ್ಷಿತ್ ತನ್ನ ಮನೆಯಲ್ಲಿ ಮೈಸೂರಿಗೆ ಓದಲು ಹೋಗುವುದಾಗಿ ತಿಳಿಸಿ ಬೆಂಗಳೂರಿಗೆ ಬಂದಿದ್ದರು. ಅ.9ರಿಂದ ಬೆಂಗಳೂರಿನಲ್ಲಿ ಸಹಪಾಠಿ ವಿದ್ಯಾರ್ಥಿನಿ ಜತೆ ಗ್ರ್ಯಾಂಡ್ ಚಾಯ್ಸ್ ವಸತಿಗೃಹದಲ್ಲಿ ಕೊಠಡಿ ಪಡೆದು ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಎಂಟು ದಿನಗಳಿಂದ ಇಬ್ಬರೂ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಊಟ, ತಿಂಡಿಯನ್ನು ಆನ್‌ಲೈನ್‌ನಲ್ಲಿ ತರಿಸಿಕೊಳ್ಳುತ್ತಿದ್ದರು. ಘಟನೆ ನಡೆದ ದಿನವೂ ತರಿಸಿಕೊಂಡಿದ್ದರು. ಈ ಊಟ ಮಾಡಿದ ಅನಂತರ ಇಬ್ಬರಿಗೂ ಫುಡ್ ಪಾಯ್ಸನ್ ಆಗಿರುವ ಲಕ್ಷಣಗಳು ಕಂಡು ಬಂದಿದ್ದವು ಎನ್ನಲಾಗಿದೆ. ಅನಂತರ ಯುವತಿ ವಸತಿಗೃಹವನ್ನು ತೊರೆದಿದ್ದಳು. ತಕ್ಷಿತ್ ಕೊಠಡಿಯಿಂದ ಹೊರಗೆ ಬರದಿದ್ದ ಕಾರಣ ವಸತಿಗೃಹದ ಸಿಬಂದಿ ಶುಕ್ರವಾರ ಸಂಜೆ ಅನುಮಾನದಿಂದ ಮಾಸ್ಟರ್ ಕೀ ಬಳಸಿ ಕೊಠಡಿಯ ಬಾಗಿಲು ತೆರೆದು ನೋಡಿದಾಗ ತಕ್ಷಿತ್ ಮೃತದೇಹ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.


















