ಕಾರ್ಕಳ : ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಲಿತಾ ಕಲಾ ಸಂಘ, ಯಕ್ಷಗಾನ ಸಂಘ, ಶ್ರೇಷ್ಠ ಕಲಾ, ಚೆಂಡೆ ತರಗತಿಗಳ ಉದ್ಘಾಟನೆ

ಕಾರ್ಕಳ : ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಲಿತಾ ಕಲಾ ಸಂಘ, ಯಕ್ಷಗಾನ ಸಂಘ, ಶ್ರೇಷ್ಠ ಕಲಾ ಹಾಗೂ ಚೆಂಡೆ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಅ.16 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಶ್ರೀ ಮಹಾಗಣಪತಿ ಚಂಡೆ ವರ್ಕ್ಸ್ ಕಾರ್ಕಳ ಇದರ ಮಾಲಕರಾದ ಮಂಜುನಾಥ ಭಾವಿ ಅವರು, ಯಕ್ಷಗಾನ ಹಾಗೂ ಚಂಡೆ ನಮ್ಮ ಸಂಸ್ಕೃತಿಯ ಭಾಗ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ  ಭುವನೇಂದ್ರ ಕಾಲೇಜಿನ  ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪದ್ಮನಾಭ ಗೌಡ ಮಾತನಾಡಿ, ಯಕ್ಷಗಾನವು ಆರಾಧನಾ ಕಲೆಯಾಗಿದೆ. ಯಾವುದೇ ಪ್ರಸಂಗವು ಪ್ರಾರಂಭವಾಗಿ ಮುಕ್ತಾಯವಾಗುವವರೆಗೂ ದೇವರ ಸ್ತುತಿಗೆ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಹಾಡುಗಾರಿಕೆ, ನೃತ್ಯಗಾರಿಕೆ, ವಾದ್ಯಗಾರಿಕೆ ಹಾಗೂ ಬಣ್ಣಗಾರಿಕೆಯು ಯಕ್ಷಗಾನದ ವಿಶೇಷತೆಯಾಗಿದೆ.  ಯಕ್ಷಗಾನವು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರು.

ಕಾಂತಾವರ  ಯಕ್ಷಗಾನ ಗುರು ಮಹಾವೀರ ಪಾಂಡಿ ಮಾತನಾಡಿ, ಯಕ್ಷಗಾನವು ವಿದ್ಯಾರ್ಥಿಗಳಲ್ಲಿ ಸುಮನ ಸಮಾನ ಮನಸ್ಸು ಹಾಗೂ ಉದಾತ್ತ ಚಿಂತನೆಗಳಿಗೆ ಅವಕಾಶ ನೀಡುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ.ಕೆ ಮಾತನಾಡಿ, ಯಕ್ಷಗಾನವು ಕರಾವಳಿಯ ಕಲೆಯಾಗಿದ್ದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚರಣೆಯ ಪ್ರತೀಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಐಕ್ಯೂಎಸ್‌ಸಿ ಸಂಚಾಲಕರಾದ ವಿನಯ ಎಂ ಎಸ್ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ಡಾ. ಚಂದ್ರಾವತಿ ಉಪಸ್ಥಿತರಿದ್ದರು. ಲಲಿತ ಕಲಾ ಸಂಘದ ಸಂಚಾಲಕರಾದ ಸೌಮ್ಯ ಎಚ್ ಕೆ ಹಾಗೂ ಯಕ್ಷಗಾನ ಸಂಘದ ಸಂಚಾಲಕರಾದ ಡಾ. ಸುದರ್ಶನ್ ಪಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕಾರ್ಯಕ್ರಮವು ಮಹಾವೀರ ಪಾಂಡಿ ಅವರ ಶಿಷ್ಯ ವೃಂದದ ಭಾಗವತಿಕೆಯಿಂದ ಶುಭಾರಂಭಗೊಂಡಿತು. ಲಲಿತ ಕಲಾ ಸಂಘದ ಸಂಚಾಲಕರಾದ ಸೌಮ್ಯ, ಯಕ್ಷಗಾನ ಸಂಘದ ಸಂಚಾಲಕರಾದ ಸುದರ್ಶನ್, ಚಂದ್ರಾವತಿ, ವಿನಯ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ನಿರೂಪಿಸಿದರು.ವಿದ್ಯಾರ್ಥಿ ಧನುಷ್ ಸ್ವಾಗತಿಸಿದರು.ವಿದ್ಯಾರ್ಥಿ ಸಂಚಿತ್ ವಂದಿಸಿದರು.