ಉಡುಪಿ: ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಯಾವ ಉದ್ದೇಶವಿಟ್ಟುಕೊಂಡು ‘ಅರಳು ಮರಳು’ ಹೇಳಿಕೆ ನೀಡಿದರೋ ಗೊತ್ತಿಲ್ಲ. ಎದುರಿಗೆ ಸಿಕ್ಕಾಗ ಗೌರವಯುತವಾಗಿ ಮಾತನಾಡುತ್ತಾರೆ. ಆದರೆ, ಹಿಂದಿನಿಂದ ಮಾತ್ರ ಟೀಕೆ ಮಾಡುತ್ತಲೇ ಇರುತ್ತಾರೆ. ಇಂತಹ ನಡವಳಿಕೆ ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದರು.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ದಲಿತರು ಪ್ರವೇಶ ಮಾಡಿದ್ದಕ್ಕೆ ಉಡುಪಿಯನ್ನು ಸ್ವಚ್ಛಗೊಳಿಸಲು ಮುಂದಾಗಲಿಲ್ಲ. ಎಡಬಿಡಂಗಿ ಹೋರಾಟಗಾರರು ಪ್ರತಿಭಟನೆ ಮಾಡಿದ್ದಕ್ಕೆ ಶಿಷ್ಯರು ಶುದ್ಧಿಗೊಳಿಸಲು ಮುಂದಾಗಿದ್ದಾರೆ. ಭಿನ್ನಾಭಿಪ್ರಾಯಗಳ ಕುರಿತು ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧ. ಉಡುಪಿ ಅಥವಾ ಬೆಂಗಳೂರಿನಲ್ಲಿ ಅಮೀನ್ ಮಟ್ಟು ನನ್ನೊಂದಿಗೆ ಬಂದು ಚರ್ಚಿಸಲಿ’ ಎಂದು ಶ್ರೀಗಳು ಆಹ್ವಾನ ನೀಡಿದರು.
ಪೇಜಾವರ ಶ್ರೀಗಳು ರಾಷ್ಟ್ರಪತಿ ಜತೆ ಊಟ ಮಾಡಲಿ ಎಂಬ ಪ್ರಗತಿಪರರ ಆಗ್ರಹಕ್ಕೆ ಉತ್ತರಿಸಿದ ಶ್ರೀಗಳು, ಸಂನ್ಯಾಸಿಗಳಿಗೆ ಪೂಜೆ, ನಿತ್ಯಾನುಷ್ಠಾನ, ಭೋಜನ ಸ್ವೀಕಾರ ಸಹಿತ ಎಲ್ಲದಕ್ಕೂ ಪರಂಪರಾಗತ ನಿಯಮಗಳಿವೆ. ನಾನು ಬ್ರಾಹ್ಮಣರೊಂದಿಗೂ ಊಟ ಮಾಡುವುದಿಲ್ಲ. ಪದ್ದತಿಯಂತೆ ಪ್ರತ್ ಯೇಕವಾಗಿ ಭೋಜನ ಸ್ವೀಕರಿಸುತ್ತೇನೆ’ ಎಂದು ಅವರು ಸ್ಪಷ್ಟ ಪಡಿಸಿದರು.
ವಿಶ್ವ ಹಿಂದೂ ಪರಿಷತ್ನವರು ಈಗಾಗಲೇ ರಾಮಮಂದಿರದ ಬಗ್ಗೆ ಮನವಿ ನೀಡಿರುವುದರಿಂದ ನಾನು ವಿಷಯ ಪ್ರಸ್ತಾಪ ಮಾಡಿಲ್ಲ. ಫೆಬ್ರವರಿಯಲ್ಲಿ ಕುಂಭಮೇಳದಲ್ಲಿ ನಡೆಯುವ ಧರ್ಮಸಂಸತ್ನಲ್ಲಿ ಈ ಬಗ್ಗೆ ಸಾಧು-ಸಂತರು ತೀರ್ಮಾನ ಕೈಗೊಳ್ಳಲಿದ್ದಾರೆ. ಕೆಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೆ ಅನುಕೂಲಕ್ಕಿಂತ ಪ್ರತಿಕೂಲವೇ ಹೆಚ್ಚು ಎಂಬುದಾಗಿ ಹಿರಿಯ ವಕೀಲರು ಸಲಹೆ ನೀಡಿದ್ದಾರೆ ಎಂದರು.