ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಡಿಜಿಟಲ್‌ ಲಾಕರ್‌ ವ್ಯವಸ್ಥೆಗೆ ಚಾಲನೆ.

ಉಡುಪಿ: ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿಟಲ್‌ ಲಾಕರ್‌ ವ್ಯವಸ್ಥೆ ಪರಿಚಯಿಸಲಾಗಿದೆ.

ಕೊಂಕಣ ರೈಲು ವಿಭಾಗದಿಂದ ಈ ವ್ಯವಸ್ಥೆ ಜಾರಿಗೆ ತಂದಿದ್ದು, ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಲಗೇಜ್‌ಗಳನ್ನು ಇಡಲು ಬಾಕ್ಸ್‌ ವ್ಯವಸ್ಥೆ ಮಾಡಲಾಗಿದೆ. ಹೊಸ ತಂತ್ರಜ್ಞಾನ ಬಳಸಿ ಕ್ಯುಆರ್‌ಕೋಡ್‌ ಅಥವಾ ಪಿನ್‌ ವ್ಯವಸ್ಥೆಯೊಂದಿಗೆ ಲಾಕರ್‌ನಲ್ಲಿ ಪ್ರಯಾಣಿಕರು ತಮ್ಮ ಲಗೇಜ್‌ ಇಡಬಹುದಾಗಿದೆ.

3 ಗಂಟೆ, 6 ಗಂಟೆ, 12 ಗಂಟೆ ಹಾಗೂ 24 ಗಂಟೆಗಳ ವರೆಗೆ ಡಿಜಿಟಲ್‌ ಲಾಕರ್‌ ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಲಗೇಜ್‌ ಇಡಬಹುದಾಗಿದೆ. ತುರ್ತು ಕಾರ್ಯ ಅಥವಾ ನಗರದ ಪ್ರದಕ್ಷಿಣಿ ಇತ್ಯಾದಿಗಳಿಗೆ ಬರುವವರು ಸರಳ ವಿಧಾನದ ಮೂಲಕ ಈ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ. ಲಗೇಜ್‌ ಗಾತ್ರದ ಆಧಾರದಲ್ಲಿ ಶುಲ್ಕ ವಿಧಿಸಲಾಗುತ್ತದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.