ಉಡುಪಿ: ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ನನಗೆ ಪುಟ್ಟ ಮಕ್ಕಳನ್ನು ಕ್ರೀಡೆಯುತ್ತ ಸೆಳೆಯುವುದರಲ್ಲಿ ಆಸಕ್ತಿ. ಬ್ಯಾಡ್ಮಿಂಟನ್ ನನ್ನ ಹೃದಯಕ್ಕೆ ತುಂಬಾ ಹತ್ತಿರದ ಕ್ರೀಡೆ ಯಾವತ್ತಾದರೂ ರಾಜಕೀಯದ ಬಗ್ಗೆ ಆಸಕ್ತಿ ಬಂದರೆ ನೋಡೋಣ ಎಂದು ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಹೇಳಿದರು.
ಮಣಿಪಾಲ ಕೆಎಂಸಿ ಟಿಎಂಎ ಪೈ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆ ಉತ್ತರಿಸಿದ ಅವರು, ನನಗೆ ನರೇಂದ್ರ ಮೋದಿಯವರ ಚಿಂತನೆ ತುಂಬಾ ಇಷ್ಟ. ರಾಜಕೀಯ ನಾಯಕರಲ್ಲಿ ನರೇಂದ್ರ ಮೋದಿ ನನ್ನ ನೆಚ್ಚಿನ ಮುಖಂಡ. ಕೆಲವೊಮ್ಮೆ ಅವರ ಇವೆಂಟ್ ಗಳಿಗೆ ತೆರಳಿ ನಾನು ಬೆಂಬಲಿಸುತ್ತೇನೆ. ಆದರೆ ನಾನು ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಎಂದರು.
ರಾಜಕೀಯ ತುಂಬಾ ಸುಲಭ ಎಂದು ಭಾವಿಸುತ್ತಾರೆ. ಅದು ನಾವು ಊಹಿಸಿದಷ್ಟು ಸುಲಭವಿಲ್ಲ. ಪ್ರತಿಯೊಂದು ಕ್ಷೇತ್ರವು ಭಿನ್ನ ವಾಗಿರುತ್ತದೆ. ಬ್ಯಾಡ್ಮಿಂಟನ್ ಆಟಕ್ಕಾಗಿ ನಾನು ತುಂಬಾ ತ್ಯಾಗ ಮಾಡಬೇಕಾಯಿತು. ಕಳೆದ 25 ವರ್ಷಗಳಿಂದ ಮನೆ ,ಸ್ನೇಹಿತರು,ಫುಡ್ ಎಲ್ಲವನ್ನು ಬಿಟ್ಟು ಕ್ರೀಡಾಕ್ಷೇತ್ರದಲ್ಲಿದ್ದೇನೆ. ತುಂಬಾ ಒತ್ತಡದ ಜೀವನ ನಡೆಸಿದ್ದೇನೆ ಎಲ್ಲಾ ಕ್ಷೇತ್ರಗಳಲ್ಲೂ ಒತ್ತಡ ಇರುತ್ತದೆ ಎಂದು ತನ್ನ ಸ್ವಂತ ಅನುಭವ ಬಿಚ್ಚಿಟ್ಟರು.
ಪ್ರಕಾಶ್ ಪಡುಕೋಣೆ ಓರ್ವ ಲೆಜೆಂಡ್. ಅವರ ತವರೂರಿಗೆ ಬಂದು ಸಂತೋಷವಾಗಿದೆ. ಅವರಿಂದ ಪ್ರೇರಣೆ ಪಡೆದು ನಾವು ಆಟವಾಡಿದ್ದೇವೆ. ನನ್ನ ಕೋಚ್ ಗೋಪಿ ಸರ್ ಗೂ ಅವರೇ ಪ್ರೇರಣೆ. ಪ್ರಕಾಶ್ ಪಡುಕೋಣೆ ರಿಯಲ್ ಸ್ಟಾರ್ ಅವರ ಬಗ್ಗೆ ಹೆಮ್ಮೆ ಇದೆ. ಈ ಭಾಗದಿಂದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿರುವ ಚೀರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಶೆಟ್ಟಿ ಭಾರತದ ಭರವಸೆಯ ಆಟಗಾರರು ಎಂದರು.

















