ಬೈಕ್ ನಲ್ಲಿ ಡ್ರಾಪ್ ಕೊಡಿಸುವ ನೆಪದಲ್ಲಿ ಮಹಿಳೆ ಕರೆದೊಯ್ದು ಅತ್ಯಾಚಾರ: ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಗಳ ಬಂಧನ!

ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಬೈಕ್ ಮೆಕ್ಯಾನಿಕ್ ಮತ್ತು ಅವನ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು-ಚಿಕ್ಕಬಳ್ಳಾಪು ಮುಖ್ಯ ರಸ್ತೆಯಲ್ಲಿ ನಡೆದಿದೆ.

ಆಕೆಯ ಬಳಿ ಹಣ ಅಥವಾ ಆಧಾರ್ ಕಾರ್ಡ್ ಇಲ್ಲದ ಕಾರಣ ಬಸ್ ನಲ್ಲಿ ಸಂಚರಿಸಲು ಸಾಧ್ಯವಾಗದೆ ತನ್ನೂರಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಇಬ್ಬರು ಆರೋಪಿಗಳನ್ನು ಮೆಕ್ಯಾನಿಕ್ ಸಿಕಂಥರ್ ಮತ್ತು ಆತನ ಸ್ನೇಹಿತ ಜನಾರ್ಧನ ಆಚಾರಿ ಎಂದು ಗುರುತಿಸಲಾಗಿದೆ.

ಕಳೆದ ಶುಕ್ರವಾರ ಈ ಘಟನೆ ನಡೆದಿದ್ದರೂ, ನಿನ್ನೆ ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸಿಕಂಥರ್ ಆಕೆಯ ಬಳಿ ಬೈಕ್ ನಿಲ್ಲಿಸಿ ಬಾ ನಿನ್ನೂರಿಗೆ ಬಿಟ್ಟು ಬರುತ್ತೇನೆ ಎಂದಿದ್ದಾನೆ.

ಮಹಿಳೆ ನಂಬಿ ಬೈಕ್ ಹತ್ತಿದ ಮೇಲೆ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾನೆ. ನಂತರ ಜನಾರ್ಧನನನ್ನು ಸ್ಥಳಕ್ಕೆ ಬರಲು ಹೇಳಿ ಇಬ್ಬರೂ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಮಹಿಳೆಯನ್ನು ಆಕೆಯ ಊರಿನ ಬಳಿ ಇಳಿಸಿ ಹೋಗಿ ಪರಾರಿಯಾಗಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆ ಹರಿದ ಬಟ್ಟೆಯೊಂದಿಗೆ ಇರುವುದನ್ನು ಕಂಡ ಸಾಮಾಜಿಕ ಕಾರ್ಯಕರ್ತೆ ಶಿಲ್ಪಾ ವಿಚಾರಿಸಿದಾಗ ಘಟನೆ ಬೆಳಕಿಗೆ ಬರುತ್ತದೆ. ಸಂತ್ರಸ್ತೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಹಾಯ ಮಾಡುತ್ತಾರೆ.

ಪೊಲೀಸರು ವಿಶೇಷ ತಂಡವನ್ನು ರಚಿಸಿ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದ ವಿಡಿಯೊ ದೃಶ್ಯಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಿದರು.