ಉಡುಪಿ: 2018ರಿಂದ 2024 ವರೆಗಿನ 6 ವರ್ಷಗಳ ಬಾಕಿ ಇರುವ ಕನಿಷ್ಠ ಕೂಲಿ, 2024ರಂದು ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ಯೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸುವಂತೆ ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಅಂಬಲಪಾಡಿಯ ಭಾರತ್ ಬೀಡಿ ಕಂಪೆನಿ ಎದುರು ಇಂದು ಧರಣಿ ನಡೆಸಿದರು.
ಬೀಡಿ ಮಾಲೀಕರು ಕಾರ್ಮಿಕರನ್ನು ವಂಚನೆ ಮಾಡುತ್ತಿದ್ದಾರೆ. ಕಾನೂನುಬದ್ಧ ಸವಲತ್ತುಗಳನ್ನು ನಾಶ ಮಾಡಲು ಹೊರಟಿದ್ದಾರೆ. 2018ರಿಂದ 2024 ರವರೆಗೆ ಆರು ವರ್ಷಗಳ ಕನಿಷ್ಠ ಕೂಲಿಯನ್ನು ಈವರಗೂ ಪಾವತಿಸಿಲ್ಲ. ಬೀಡಿ ಮಾಲೀಕರು ಈಗಾಗಲೇ ನೀಡಲು ಒಪ್ಪಿರುವ ಮೊತ್ತವನ್ನು ಪಾವತಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಪ್ರತಿ ಸಾವಿರ ಬೀಡಿಗೆ 40 ರೂ. ನಂತೆ ಒಟ್ಟು ಮೊತ್ತ 1000 ಕೋಟಿ ರೂ. ಗೂ ಹೆಚ್ಚು ಪಾವತಿಸಬೇಕು. ಆದ್ದರಿಂದ ಈ ಮೊತ್ತವನ್ನು ಕೂಡಲೇ ಬೀಡಿ ಕಾರ್ಮಿಕರಿಗೆ ನೀಡಬೇಕು ಎಂದು ಬೀಡಿ ಕಾರ್ಮಿಕರು ಆಗ್ರಹಿಸಿದರು.
ಎಐಟಿಸಿಯು ಜಿಲ್ಲಾಧ್ಯಕ್ಷ ಬಿ. ಗೋಪಾಲ ಮಾತನಾಡಿ, ಬೀಡಿ ಮಾಲೀಕರ ಪ್ರಸ್ತಾಪದಂತೆ ಕರ್ನಾಟಕ ರಾಜ್ಯ ಸರಕಾರ ಕನಿಷ್ಟ ಕೂಲಿಯ ಅಧಿಸೂಚನೆ ಹೊರಡಿಸಿದೆ. 2024ರ ಎಪ್ರಿಲ್ 1 ರಿಂದ ಸಾವಿರ ಬೀಡಿಗೆ ರೂ. 270 ಕನಿಷ್ಠ ಕೂಲಿ ಮತ್ತು ರೂ. 17.04ರಂತೆ ತುಟ್ಟಿಭತ್ತೆಯನ್ನು ಪಾವತಿಸಬೇಕೆಂದು ಆದೇಶಿಸಿದೆ. ಆದರೆ ಬೀಡಿ ಮಾಲೀಕರು ಈವರೆಗೂ ಪಾವತಿಸಲಿಲ್ಲ. 2025 ರ ಎಪ್ರಿಲ್ 1 ರಿಂದ ಈ ವರ್ಷದ ಕನಿಷ್ಟ ಕೂಲಿಗೆ 2025ರಲ್ಲಿ ಏರಿಕೆಯಾಗಿದ್ದ ರೂ. 14.88 ಸೇರಿಸಿ ಒಟ್ಟು ರೂ. 301.92 ರಂತೆ ಪಾವತಿಸಬೇಕು. ಆದರೆ ಮಾಲೀಕರು ಈ ಮೊತ್ತದಲ್ಲಿ ಕಡಿತಗೊಳಿಸಿ ಬರೀ ರೂ. 284.88 ರಂತೆ ಮಜೂರಿಯನ್ನು ಪಾವತಿಸಿ ಬೀಡಿ ಕಾರ್ಮಿಕರಿಗೆ ವಂಚಿಸುತ್ತಿದ್ದಾರೆ ಎಂದು ಗುಡುಗಿದರು.
ಸಿಐಟಿಯು ಮುಖಂಡ ಸುರೇಶ್ ಕಲ್ಲಾಗರ್, ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲವಡೇಯರ ಹೋಬಳಿ, ಕೋಶಾಧಿಕಾರಿ ಕವಿರಾಜ್ ಎಸ್.ಎಚ್., ಸಿಐಟಿಯು ಮುಖಂಡ ಶಶಿಧರ್ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.


















