ಮಂಗಳೂರು:ಮಾನಸಿಕ ಆರೋಗ್ಯ ದಿನಾಚರಣೆ:“ಬೀಕನ್ ಬಡ್ಡೀಸ್” ಮಕ್ಕಳ ಹಕ್ಕುಗಳ ಕ್ಲಬ್ ಉದ್ಘಾಟನೆ


ಮಂಗಳೂರು : ಪ್ರಸಕ್ತ ದಿನಗಳಲ್ಲಿ ಮಕ್ಕಳ ಮಾನಸಿಕ ಸಮಸ್ಯೆ ಆತಂಕಕಾರಿಯಾಗಿದೆ. ಪೊಲೀಸ್ ಠಾಣೆಗೆ ಬರುತ್ತಿರುವ ಯುವ
ಜನತೆಯ ಸಮಸ್ಯೆಗಳು ಗಾಬರಿ ಹುಟ್ಟಿಸುತ್ತದೆ. ಶಾಲಾ ಕಾಲೇಜುಗಳು ಉತ್ತಮ ಮೌಲ್ಯ ಮತ್ತು ಶಿಸ್ತುಬದ್ಧ ಶಿಕ್ಷಣವನ್ನು ನೀಡಿದರೆ
ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಬಹುದು. ಇಂಥ ಸೇವೆಯನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದು ಮಂಗಳೂರಿನ ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಟಿ. ಡಿ. ನಾಗರಾಜ್ ಅವರು ಹೇಳಿದರು.

ಮಾನಸಿಕ ಆರೋಗ್ಯ ದಿನಾಚರಣೆಯಂಗವಾಗಿ ವಳಚ್ಚಿಲ್ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ “ಸಹಪಾಠಿಗಳ ಕೌನ್ಸಿಲಿಂಗ್”
ಮತ್ತು ಮಕ್ಕಳ ಹಕ್ಕುಗಳ ಜಾಗೃತಿಗಾಗಿ ಆಯೋಜಿಸಿದ “ಬೀಕನ್ ಬಡ್ಡೀಸ್” ಎಂಬ ಮಕ್ಕಳ ಹಕ್ಕುಗಳ ಕ್ಲಬ್ಬಿನ ಔಪಚಾರಿಕ
ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಶಿಸ್ತುಬದ್ಧ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಎಕ್ಸ್ ಪರ್ಟ್ ಕಾಲೇಜು ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿದೆ. ಮಾನಸಿಕ ಸಮಸ್ಯೆಗಳನ್ನು ಸಹಪಾಠಿಗಳ ಸಹಕಾರದಲ್ಲಿ ಪರಿಣಾಮಕಾರಿಯಾಗಿ ಬಗೆಹರಿಸಲು ನಾಂದಿಹಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಈ ಸೇವಾಕಾರ್ಯ ರಾಜ್ಯದಲ್ಲೇ ಪ್ರಪ್ರಥಮ ಎಂದವರು ಒತ್ತಿಹೇಳಿದರು.

ಹದಿಹರೆಯದಲ್ಲಿ ಬಹುತೇಕ ವಿದ್ಯಾರ್ಥಿಗಳು ತಪ್ಪುದಾರಿ ತುಳಿಯುತ್ತಾರೆ. ಹೆತ್ತವರು, ಗುರುಹಿರಿಯರ ಮೇಲೆ ಅತ್ಯಂತ ಗೌರವ ಹೊಂದಿರುವ ಮಕ್ಕಳು ಸಮಾಜದಲ್ಲಿ ಯಶಸ್ಸು ಪಡೆಯುತ್ತಾರೆ. ಮನೋಬಲ, ಮಾನಸಿಕ ಸ್ಥೈರ್ಯ ಇದ್ದರೆ ಗೆಲುವು ಖಚಿತ ಎಂದರು.ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸದ್ಭಾವನೆಯಿಂದ ಸಮಾಜದಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್ . ಅವರು ಮಾತನಾಡಿ,
ಹೆತ್ತವರು ಮತ್ತು ಗುರುಹಿರಿಯರ ಮೌಲ್ಯಗಳನ್ನು ವಿದ್ಯಾರ್ಥಿಗಳು ಮರೆಯಬಾರದು. ವಿದ್ಯಾರ್ಥಿಗಳಿಗಾಗಿ ಎಕ್ಸ್ ಪರ್ಟ್ ಕಾಲೇಜು
ಅತ್ಯುತ್ತಮ ರಕ್ಷಣಾ ನೀತಿಯನ್ನು ರೂಪಿಸಿದೆ. ಇದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಬೌದ್ಧಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಗಂಭೀರವಾಗಿ ಚಿಂತಿಸಿ ಇಂಥ ಹೆಜ್ಜೆ ಇಟ್ಟಿರುವುದು ಸಂಸ್ಥೆಗೆ ಹೆಮ್ಮೆ ತರುವ ಕಾರ್ಯವಾಗಿದೆ ಎಂದವರು ಮೆಚ್ಚುಗೆ ಸೂಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್ ನಾಯಕ್ ಅವರು
ಮಾತನಾಡಿ, ಇದೊಂದು ಮಹತ್ತ್ವದ ಹೆಜ್ಜೆಯಾಗಿದ್ದು, ವಿದ್ಯಾರ್ಥಿಗಳಿಗೆ ಹಾಗು ಸಮಾಜಕ್ಕೆ ಉಪಯೋಗಪ್ರದವಾಗಲಿದೆ.ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮ ಮತ್ತು ಶಿಸ್ತು ಸಾಧನೆಗೆ ದಾರಿದೀಪವಾಗಿದೆ. ನಮ್ಮ ಕರ್ತವ್ಯಗಳನ್ನು ಮರೆಯದೆ ಹಕ್ಕುಗಳನ್ನು ಅರಿತು ಬಳಸಿದರೆ ಅರ್ಥಪೂರ್ಣವಾಗುತ್ತದೆ ಎಂದರು.

ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್ ಅವರು ಮಾತನಾಡಿ, ಇಂದಿನ ಮಕ್ಕಳು ವಯೋಮಾನ ಮೀರಿ ಬುದ್ಧಿವಂತರಾಗುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸುವಷ್ಟು ವಿಕಾಸಗೊಳ್ಳುತ್ತಿದ್ದಾರೆ; ಆದರೆ ಇದು ಇಂಥ ಅರಿವು ಮೂಡಿಸುವ ಸತತ ಕಾರ್ಯಕ್ರಮಗಳಿಂದ ಮಾತ್ರ ಇದು ಸಾಧ್ಯವಾಗಬಹುದು ಎಂದು ಹೇಳಿದರು.

ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. . ನಾಯಕ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ಎನ್. ಕೆ. ವಿಜಯನ್ ಕರಿಪ್ಪಾಲ್ ಅವರು ಸ್ವಾಗತಿಸಿದರು. ಉಪಪ್ರಾಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ
ವಂದಿಸಿದರು.

“ಬೀಕನ್ ಬಡ್ಡೀಸ್‌” ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಕರ್ನಾಟಕದಲ್ಲಿ ಇದೇ ಮೊದಲನೆಯದು. ಇದು ವಿದ್ಯಾರ್ಥಿಗಳ
ನೇತೃತ್ವದಲ್ಲಿ ಸಮಾನ ವಯೋಮಾನದ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಿದೆ.
ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ತಮ್ಮ ಸಹಪಾಠಿಗಳನ್ನು ಭಾವನಾತ್ಮಕವಾಗಿ ಬೆಂಬಲಿಸುವ ಕೌಶಲ್ಯಗಳೊಂದಿಗೆ
ಸಬಲೀಕರಣಗೊಳಿಸುತ್ತದೆ. ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಈ ಎರಡು
ಪ್ರಮುಖ ಆಯಾಮಗಳನ್ನು ವಿಲೀನಗೊಳಿಸುವ ಮೂಲಕ, ಕ್ಲಬ್ ಮಕ್ಕಳ ಹಕ್ಕುಗಳ ಕುರಿತು ಅರಿವುಳ್ಳ ಶಾಲಾ ವಾತಾವರಣವನ್ನು ಸೃಷ್ಟಿಸುತ್ತದೆ.

“ಬೀಕನ್ ಬಡ್ಡೀಸ್‌”ನ ಉದ್ದೇಶಗಳು:
ತಮ್ಮ ಸ್ನೇಹಿತರಲ್ಲಿ ಒತ್ತಡ, ಆತಂಕ ಅಥವಾ ಭಾವನಾತ್ಮಕ ಸವಾಲುಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಬಲ್ಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರಾಥಮಿಕ ಹಂತದ ಬೆಂಬಲವನ್ನು ನೀಡುತ್ತದೆ.ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಶಾಲಾ ಸಮುದಾಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣಾ ನೀತಿಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಸಹಪಾಠಿಗಳೊಂದಿಗೆ ಗೌರವ, ಸಹಾನುಭೂತಿ, ಒಗ್ಗಟ್ಟಿನ ಸಂಸ್ಕೃತಿ, ಕಾನೂನುಗಳ ಅರಿವು ಮತ್ತು ಪ್ರಾಯೋಗಿಕ ತಿಳುವಳಿಕೆಯನ್ನು ಮೂಡಿಸಲಿದೆ.