ಕುಂದಾಪುರ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಸುಲಿಗೆ; ಇಬ್ಬರು ಆರೋಪಿಗಳ ಬಂಧನ

ಉಡುಪಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಸುಲಿಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬದ ಆನವಟ್ಟಿ ಗ್ರಾಮದ ಸಂಜಯ್‌ ಎಲ್‌ (33) ಮತ್ತು ದಾವಣಗೆರೆ ಜಿಲ್ಲೆಯ ವಿನೋಬನಗರದ ವಸಂತ ಕುಮಾರ್‌ (30) ಬಂಧಿತ ಆರೋಪಿಗಳು.

ಮೀನಾಕ್ಷಿ ಎಂಬವರು ಮಗಳೊಂದಿಗೆ ಕುಂದಾಪುರ ಶಾಸ್ತ್ರೀ ಸರ್ಕಲ್ ಗೆ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕ್ ನಲ್ಲಿ ಬಂದ ಇಬ್ಬರು ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು‌ ಬಂಧಿಸಿದ ಪೊಲೀಸರು ಬಂಧಿತರಿಂದ 3 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ, ಸ್ಕಾರ್ಫಿಯೋ ಕಾರು, ಬೈಕ್ ಸಹಿತ ಒಟ್ಟು 8.20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ‌.