ಕುಂದಾಪುರ: ನಟ ಕಿಚ್ಚ ಸುದೀಪ್ ಅಭಿಮಾನಿಯೋರ್ವನ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ಚಿಕನ್ಸಾಲ್ ರಸ್ತೆ ನಿವಾಸಿಗಳಾಸ ಗುರುರಾಜ್ ಪುತ್ರನ್(28), ಸಂತೋಷ (30), ಪ್ರದೀಪ್(29), ರವಿರಾಜ್ ಬಂಧಿತ ಆರೋಪಿಗಳು.
ನಟ ಸುದೀಪ್ ವಿರುದ್ದ ಹೇಳಿಕೆ ನೀಡಿದ್ದ ವಿನಯ ಗುರೂಜಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವ್ಯಕ್ತಪಡಿಸಿದ್ದ ನಟ ಸುದೀಪ್ ಅಭಿಮಾನಿಯಾಗಿರುವ ಕೋಟತಟ್ಟು ಬಾರಿಕೆರೆ ನಿವಾಸಿ ರತ್ನಾಕರ ಪೂಜಾರಿಯವರಿಗೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ.
ವಿನಯ್ ಗುರೂಜಿ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶವನ್ನು ರತ್ನಾಕರ್ ಪೂಜಾರಿ ಪೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಅಕ್ಟೋಬರ್ 13ರಂದು ಕುಂದಾಪುರ ಸಂಗಮ್ ಶಾಲೆ ಬಳಿ ರತ್ನಾಕರ್ ಪೂಜಾರಿಯವರಿಗೆ‘ನಮ್ಮ ವಿನಯ್ ಗುರೂಜಿ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನ ಮಾಡುತ್ತಿಯಾ’ಎಂದು ಅವಾಚ್ಯ ಶಬ್ದಗಳಿಂದ ಬೈದು, ಬೈಕ್ನ ಬಂಪರ್ಗೆ ಅಳವಡಿಸುವ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ 2 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಜವಾಬ್ದಾರಿಯುತ, ವಿವೇಚನಾತ್ಮಕವಾಗಿ ಬಳಸುವ ಮೂಲಕ ಇಂತಹ ಘಟನೆಗಳು ನಡೆಯದಂತೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.












